ಲೈಂಗಿಕ ಹಗರಣ ಪ್ರಕರಣ: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Update: 2024-05-06 07:19 GMT

ಮಂಗಳೂರು, ಮೇ 6 : ಲೈಂಗಿಕ ಹಗರಣ ಪ್ರಕರಣದ ಆರೋಪಿಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಎದುರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಪ್ರಜ್ವಲ್ ನನ್ನು ಬಂಧಿಸಿ, ಮಹಿಳೆಯರಿಗೆ ನ್ಯಾಯ ಒದಗಿಸಿ ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಲೆಟ್ ಪಿಂಟೋ, ಪ್ರಜ್ವಲ್ ನ ಲೈಂಗಿಕ ಹಗರಣದ ಬಗ್ಗೆ ಮಾಹಿತಿ ಇದ್ದೂ ಆತನಿಗೆ ಟಿಕೆಟ್ ನೀಡಿರುವುದಲ್ಲದೆ, ಆತನ ರಕ್ಷಣೆಗೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮುಂದಾಗಿದೆ. ಬೇಟಿ ಬಚಾವೊ, ಅಂದವರು ಈಗ ಎಲ್ಲಿದ್ದಾರೆ. ಪೆನ್ ಡ್ರೈವ್ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನ ಗ್ಯಾರಂಟಿ ಹಣದಿಂದ ಮಹಿಳೆಯರು ದಾರಿ ತಪುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆದರೆ ದಾರಿ ತಪ್ಪಿದ್ದು ಜೆಡಿಎಸ್ ನಾಯಕರು. ಅದೆಷ್ಟೋ ಹೆಣ್ಣು ಮಕ್ಕಳಿಗೆ ಇನ್ನಿಲ್ಲದ ಶಿಕ್ಷೆ ನೀಡಿದ್ದಾರೆ. ಆ ಮಹಿಳೆಯರ ಕುಟುಂಬ ಹಾಳಾಗುವಂತೆ ಮಾಡಿದ್ದಾರೆ. ಪ್ರಜ್ವಲ್ ನನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ದೇಶದ ರಕ್ಷಣೆ ಆಗಬೇಕಾದರೆ ಮಹಿಳೆಯರು ಸುರಕ್ಷಿತವಾಗಿರಬೇಕು. ಆದರೆ ಅದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಜೆಡಿಎಸ್ ನಿಂದ ಸಾಧ್ಯವಿಲ್ಲ. ಕಾಂಗ್ರೆಸ್ ನಿಂದ ಮಾತ್ರ ದೇಶ ರಕ್ಷಣೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಶಾಂತಲಾ ಗಟ್ಟಿ, ಶಶಿಕಲಾ, ತನ್ವೀರ್ ಷಾ, ಸಾರಿಕಾ ಪೂಜಾರಿ, ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News