ಜನತಾದರ್ಶನ ಕಾರ್ಯಕ್ರಮಕ್ಕೆ ಗೈರು: ಗಣಿ ಇಲಾಖೆ ಅಧಿಕಾರಿಗೆ ಶೋಕಾಸ್ ನೊಟೀಸ್
Update: 2025-03-04 19:03 IST
ಮಂಗಳೂರು: ದ.ಕ.ಜಿಲ್ಲೆಯ ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿಗೆ ಇಲಾಖೆಯ ನಿರ್ದೇಶಕರು ಶೋಕಾಸ್ ನೊಟೀಸ್ ನೀಡಿದ್ದಾರೆ.
ಫೆ.೫ರಂದು ಬಂಟ್ವಾಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನತಾದರ್ಶನ ಕಾರ್ಯಕ್ರಮಕ್ಕೆ ಗಣಿ ಇಲಾಖೆ ಅಧಿಕಾರಿಯು ಯಾವುದೇ ಪೂರ್ವಾನುಮತಿ ಇಲ್ಲದೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಸಚಿವರು ಸೂಚಿಸಿದ್ದರು. ಅದರಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು, ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ವಯ ಶಿಸ್ತುಕ್ರಮ ಜರುಗಿಸಲು ಸರಕಾರಕ್ಕೆ ಯಾಕೆ ಶಿಫಾರಸು ಮಾಡಬಾರದು ಪ್ರಶ್ನಿಸಿ ಮೂರು ದಿನಗಳಲ್ಲಿ ವಿವರಣೆ ನೀಡಲು ಸೂಚಿಸಿದ್ದಾರೆ. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ನೊಟೀಸ್‌ನಲ್ಲಿ ತಿಳಿಸಲಾಗಿದೆ.