ಇಸ್ರೇಲ್‌ನಲ್ಲಿ ದಕ್ಷಿಣ ಕನ್ನಡಿಗರು ಸುರಕ್ಷಿತ: ವರದಿ
ಮಂಗಳೂರು, ಅ. 9: ಇಸ್ರೇಲ್‌ನಲ್ಲಿ ಹಮಾಸ್ ಮತ್ತು ಇಸ್ರೇಲ್ ಸೇನೆಯ ನಡುವಿನ ಸಂಘರ್ಷ ಮುಂದು ವರಿದಿದ್ದು, ಅಲ್ಲಿ ನೆಲೆಸಿರುವ ಕನ್ನಡಿಗರು ಸುರಕ್ಷಿತರಾಗಿರುವುದು ವರದಿಯಾಗಿದೆ.
ಇಸ್ರೇಲ್‌ನಲ್ಲಿ ಸುಮಾರು 12,000 ಕರಾವಳಿಯ ಕನ್ನಡಿಗರಿದ್ದಾರೆ. ಅವರ ಪೈಕಿ 8,000 ಅಧಿಕ ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರು ಉದ್ಯೋಗ ನಿಮಿತ್ತ ತೆರಳಿದವರು ಅಲ್ಲಿ ನೆಲೆಸಿದ್ದಾರೆ.
ಅವರೆಲ್ಲರೂ ಜೆರುಸಲೇಮ್ ಮತ್ತು ಸುತ್ತಮುತ್ತ ವಾಸಿಸುತ್ತಿದ್ದರೂ, ಅವರು ಸುರಕ್ಷಿತವಾಗಿದ್ದಾರೆ. ಅವರಲ್ಲಿ ಸುಮಾರು ಶೇ 50 ಮಂದಿ ಮಹಿಳೆಯರಿದ್ದಾರೆ. ಅವರಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಹಿಂದುಗಳು ಇದ್ದಾರೆ. ಅಲ್ಲಿ ನೆಲೆಸಿರುವ ಬಹುತೇಕ ಮಂದಿ ಕೇರ್ ಗೀವರ್ಸ್(ಹೋಮ್ ನರ್ಸ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡಿಗರು ಜೆರುಸಲೇಮ್, ಟೆಲ್ ಅವಿವ್, ಏಂಜೆಲಿಕಮ್ ಮತ್ತು ಹೈಫಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಬಹುತೇಕ ಮಂದಿ ಸುರಕ್ಷಿತ ಸ್ಥಳದಲ್ಲಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನವರಾದ ಲಿಯೊನಾರ್ಡ್ ಫೆರ್ನಾಂಡಿಸ್ ಮಾತನಾಡಿ, ನಾನು 14 ವರ್ಷಗಳಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಪ್ರಕಾರ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೈರನ್ ಮೊಳಗುತ್ತದೆ. ಆಗ ನಾವು ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಆಶ್ರಯ ಪಡೆಯುತ್ತೇವೆ ಎಂದು ಹೇಳುತ್ತಾರೆ.
ಆರು ತಿಂಗಳ ಹಿಂದೆ ಮಂಗಳೂರಿಗೆ ಮರಳಿದ ರಾಮ್ ಕುಮಾರ್ ಅಮೀನ್ ಪ್ರಕಾರ ‘‘ಇಸ್ರೇಲ್‌ನ ಪ್ರತಿಯೊಂದು ಮನೆಯಲ್ಲೂ ಆಶ್ರಯ ಪಡೆಯಲು ಸಣ್ಣ ಪ್ರತ್ಯೇಕ ಕೊಠಡಿ ಇದೆ. ಇದು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಸೈರನ್ ಮೊಳಗುತ್ತಿದ್ದಂತೆ, ನಾವು ಆ ಕೋಣೆಯನ್ನು ಪ್ರವೇಶಿಸಬೇಕಾಗಿದೆ. ಇನ್ನೊಂದು ಸೈರನ್ ನೀಡಿದ ನಂತರವೇ ನಾವು ಕೋಣೆಯಿಂದ ಹೊರಗೆ ಬರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಲಿಯೊನಾರ್ಡ್ ಫೆರ್ನಾಂಡಿಸ್ ಅವರು, ‘‘ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಕ್ಟೋಬರ್ 10 ರಂದು ಮಂಗಳೂರಿಗೆ ಬರಬೇಕಿತ್ತು. ಆದರೆ, ಈಗ ಯುದ್ಧದ ಕಾರಣ ವಿಮಾನಗಳು ರದ್ದಾಗಿವೆ. ಹೀಗಾಗಿ ಅವರು ಸಮಸ್ಯೆಯಲ್ಲಿ ದ್ದಾರೆ. ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ.
ದೂರವಾಣಿ ಸಂಪರ್ಕ ಅಸ್ತವ್ಯಸ್ತ ವಾಗಿರುವ ಕಾರಣದಿಂದಾಗಿ ಕೆಲವರ ಸಂಪರ್ಕ ಕಡಿದು ಹೋಗಿದೆ. ಪಶ್ಚಿಮ ಇಸ್ರೇಲ್ ಪ್ರದೇಶಗಳ ರಸ್ತೆಗಳಲ್ಲಿ ಗುಂಡಿನ ಚಕಮಕಿ ನಡೆದಿದೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ.
ಮಂಗಳೂರು ಹೊರವಲಯದ ದಾಬಸ್ ಕಟ್ಟೆಯ ಪ್ರವೀಣ್ ಪಿಂಟೋ ಕಳೆದ 16 ವರ್ಷಗಳಿಂದ ಇಸ್ರೇಲ್‌ನ ಟಲ್ ಅವೀವ್‌ನಲ್ಲಿ ನೆಲೆಸಿದ್ದಾರೆ. ಅವರ ಕುಟುಂಬ ಆತಂಕದಲ್ಲಿದೆ.
ಪ್ರವೀಣ್ ಪಿಂಟೋ ಬಂಕರ್‌ನಲ್ಲಿ ಸುರಕ್ಷಿತವಾಗಿದ್ದಾರೆ. ಅವರಿಗೆ ಮನೆಯಿಂದ ಹೊರ ಬರದಂತೆ ಭಾರತೀಯ ರಾಯಭಾರ ಕಚೇರಿಯಿಂದ ಸೂಚನೆ ಲಭಿಸಿದೆ ಎಂದು ಮೂಲಗಳು ತಿಳಿಸಿವೆ.
‘‘ದಕ್ಷಿಣ ಕನ್ನಡದ ಎಷ್ಟು ಮಂದಿ ಇಸ್ರೇಲ್‌ನಲ್ಲಿದ್ದಾರೆಂಬ ಮಾಹಿತಿ ಜಿಲ್ಲಾಡಳಿತದ ಬಳಿ ಇಲ್ಲ. ಅಲ್ಲಿ ಸಿಲುಕಿಕೊಂಡಿರುವವರು ಮತ್ತು ಅವರ ಕುಟುಂಬದ ಯಾರೂ ಕೂಡ ಜಿಲ್ಲಾಡಳಿತವನ್ನು ಸಂಪರ್ಕಿಸಿಲ್ಲ. ಸಂಕಷ್ಟದಲ್ಲಿರುವ ಕನ್ನಡಿಗರಿಗಾಗಿ ರಾಜ್ಯ ಸರಕಾರ ಈಗಾಗಲೇ ಸಹಾಯವಾಣಿ ಆರಂಭಿಸಿದೆ. ಯಾರಾದರೂ ಜಿಲ್ಲಾಡಳಿತದ ಸಹಾಯ ಕೇಳಿದರೆ ನಾವು ಸಾಧ್ಯವಿರುವ ನೆರವು ನೀಡುತ್ತೇವೆ.
-ಡಾ. ಆನಂದ .ಕೆ.
ಪ್ರಭಾರ ಜಿಲ್ಲಾಧಿಕಾರಿ ದ.ಕ. ಜಿಲ್ಲೆ