ಕ್ರೀಡಾ ಸಾಧನೆಯಿಂದ ಉತ್ತಮ ಉದ್ಯೋಗಾವಕಾಶ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಅ.1: ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದವರಿಗೆ ಉದ್ಯೋಗ ಕ್ಷೇತ್ರದಲ್ಲೂ ಹೆಚ್ಚಿನ ಅವಕಾಶವಿದೆ. ಸ್ಥಳೀಯವಾಗಿ ನಡೆಯುವ ಕ್ರೀಡಾಕೂಟಗಳನ್ನು ರಾಜ್ಯ, ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶವಾಗಿ ಬಳಿಸಿಕೊಳ್ಳಬೇಕು ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಸಂಸ್ಥೆಗಳು, ಮಂಗಳೂರು ಮಹಾನಗರ ಪಾಲಿಕೆ ಸಹಯೋಗ ದಲ್ಲಿ ರವಿವಾರ ಮಂಗಳಾ ಕ್ರೀಡಾಂಗಣದಲ್ಲಿ ದ.ಕ.ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದ.ಕ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಸ್, ಹ್ಯಾಂಡ್ ಬಾಲ್ ಅಸೋಸಿಯೇಶನ್ ಅಧ್ಯಕ್ಷ ಧನ್‌ರಾಜ್, ಸುಳ್ಯ ದಸರಾ ಕ್ರೀಡಾಕೂಟದ ನೋಡಲ್ ಅಧಿಕಾರಿ ದೇವರಾಜ್ ಮುತ್ಲಾಜೆ, ದ.ಕ ಜಿಲ್ಲಾ ವೇಟ್‌ಲಿಫ್ಟಿಂಗ್ ಕೋಚ್ ಸರಸ್ವತಿ ಪುತ್ರನ್ ಉಪಸ್ಥಿತರಿದ್ದರು.
ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ.ನಾಯಕ್ ಸ್ವಾಗತಿಸಿ, ಕಚೇರಿ ಅಧೀಕ್ಷಕ ಮಂಜುನಾಥ್ ವಂದಿಸಿದರು. ಕಾಟಿಪಳ್ಳ 8ನೇ ವಿಭಾಗದ ದ.ಕ.ಜಿ.ಪಂ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ನಿರ್ದೇಶಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
ಅಥ್ಲೆಟಿಕ್, ಹ್ಯಾಂಡ್‌ಬಾಲ್, ವಾಲಿಬಾಲ್, ಕುಸ್ತಿ, ಬಾಸ್ಕೆಟ್‌ಬಾಲ್, ಥ್ರೋಬಾಲ್, ನೆಟ್‌ಬಾಲ್, ಬಾಲ್ ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್, ಈಜು, ಟೆನ್ನಿಸ್, ಟೇಬಲ್ ಟೆನ್ನಿಸ್ ಸೇರಿದಂತೆ ವಿವಿಧ 17 ಕ್ರೀಡಾ ಸ್ಪರ್ಧೆಗಳು ನಡೆಯಿತು. 1200ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.