ಐವನ್ ಡಿಸೋಜರ ಮನೆಗೆ ಕಲ್ಲು ತೂರಾಟ ನಡೆದದ್ದು ತಡವಾಯಿತು, ಮೊನ್ನೆಯೇ ಆಗಬೇಕಿತ್ತು: ಶರಣ್ ಪಂಪ್ ವೆಲ್
ಬೆಳ್ತಂಗಡಿ, ಆ.22: "ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಮನೆ ಮೇಲೆ ಕಲ್ಲು ತೂರಾಟ ನಡೆದದ್ದು ತಡವಾಯಿತು. ಅದು ಮೊನ್ನೆಯೇ ಆಗಬೇಕಿತ್ತು" ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಉಜಿರೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಕಾರ್ಯಕ್ರಮದ ಬಗ್ಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದ.ಕ. ಜಿಲ್ಲೆ ಎಂಬುದು ರಾಷ್ಟ್ರವಾದಿಗಳ ಜಿಲ್ಲೆ. ಇಲ್ಲಿ ರಾಷ್ಟ್ರವಿರೋಧಿ ಹೇಳಿಕೆಯನ್ನು ವಿರೋಧಿಸುವುದು ನಮ್ಮ ಕರ್ತವ್ಯ. ಆ ವಿರೋಧ ಕೆಲಸವನ್ನು ಯಾರೋ ಮಾಡಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಾಗಿದೆ. ಪೊಲೀಸರು ಐವನ್ ಡಿಸೋಜರ ವಿರುದ್ದ ಕೇಸ್ ಹಾಕುವ ಕಾರ್ಯ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಜನಪ್ರತಿನಿಧಿಯಾಗಿರುವ ಐವನ್ ಡಿಸೋಜ ರಾಜಭವನಕ್ಕೆ ನುಗ್ಗುತ್ತೇವೆ, ಬಾಂಗ್ಲಾದೇಶದ ರೀತಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ರಸ್ತೆಯಲ್ಲಿ ನಮಾಝ್ ಮಾಡಿದ್ದನ್ನು ವಿರೋಧಿಸಿ ಕೇವಲ ಹೇಳಿಕೆ ನೀಡಿದ್ದಕ್ಕೆ ಕೇಸ್ ಹಾಕಿದ್ದಾರೆ, ಬೆಳ್ತಂಗಡಿ ಶಾಸಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ, ಆದರೆ ಐವನ್ ವಿರುದ್ಧ ಯಾಕೆ ಕೇಸ್ ದಾಖಲಿಸುತ್ತಿಲ್ಲ? ಪೊಲೀಸರು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಅದರಿಂದಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಶರಣ್ ಪಂಪ್ ವೆಲ್ ಹೇಳಿದ್ದಾರೆ.