ಯುವ ಸಮುದಾಯಕ್ಕೆ ಹಿರಿಯರ ಮಾರ್ಗದರ್ಶನವಿದ್ದಾಗ ಕೆಲಸದಲ್ಲಿ ಯಶಸ್ಸು : ಕೃಷ್ಣ ಜೆ ಪಾಲೆಮಾರ್

Update: 2023-10-21 17:13 GMT

ಮಂಗಳೂರು: ಹಿರಿಯರ ಆಶೀರ್ವಾದ, ಅವರ ತಿಳುವಳಿಕೆಯಿಂದ ಸಮಾಜಕ್ಕೂ ಒಳ್ಳೆಯದಾಗುತ್ತದೆ. ಯುವ ಸಮುದಾ ಯಕ್ಕೆ ಹಿರಿಯರ ಮಾರ್ಗದರ್ಶನವಿದ್ದಾಗ ಮಾತ್ರ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ ಜಿಲ್ಲಾ ಶಾಖೆ, ಒಜಾಸ್ ಎನ್‌ಜಿಒ ಮಂಗಳೂರು, ಮಾಜಿ ಸೈನಿಕರ ಸಂಘ ಮತ್ತು ರೋಟರಿ ಜಿಲ್ಲೆ 3181 ಸಹಯೋಗದಲ್ಲಿ ಶನಿವಾರ ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಹಿರಿಯರ ದಿನದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರು ತನಗೆ ವಯಸ್ಸಾಗಿದೆ, ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಭಾವನೆಯಿಂದ ಹೊರಬರಬೇಕು. ತಮ್ಮ ಚಟುವಟಿಕೆಗಳ ಮೂಲಕ ದೇಹಕ್ಕೆ ಆಗಿರುವ ವಯಸ್ಸನ್ನು ಮರೆಯಬೇಕು ಮತ್ತು ದೇಹದ ಆರೋಗ್ಯವನ್ನೂ ಕಾಪಾಡಿಕೊಳ್ಳ ಬೇಕು. ದೇಶವನ್ನೂ ಆಳಲು ಕೇವಲ ಕಿರಿಯರಿಂದ ಮಾತ್ರ ಸಾಧ್ಯವಿಲ್ಲ, ಇಂದು ಹಿರಿಯರು ಉತ್ತಮ ಆಡಳಿತದ ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡಿದರೆ, ಅಭಿವೃದ್ಧಿ ಸಾಧ್ಯವಿದೆ ಎಂದರು.

ಮಂಗಳೂರಿನ ನೆಹರೂ ಯುವಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಕೆ. ಅವರು ಮಾತನಾಡಿ, ಹಿರಿಯ ನಾಗರಿಕರು ವಯಸ್ಸಿನಲ್ಲಿ ಮಾತ್ರ ಹಿರಿಯರು, ಚಟುವಟಿಕೆಯಲ್ಲಿ ನಮಗಿಂತ ಮುಂದೆ ಇದ್ದಾರೆ. ಅವರನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.

ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಶ್ರೀಕಾಂತ್ ಶೆಟ್ಟಿ, ರೋಟರಿ ಜಿಲ್ಲೆ 3181ರ ಸಹಾಯಕ ಗವರ್ನರ್ ಪಿ.ಡಿ.ಶೆಟ್ಟಿ, ಮಂಗಳೂರು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಜೈರಾಜ್ ಮೊದಲಾದವರು ಉಪಸ್ಥಿತರಿದ್ದರು.

ಗೌರವಾರ್ಪಣೆ, ಆರೋಗ್ಯ ತಪಾಸಣೆ :ಕಾರ್ಯಕ್ರಮದಲ್ಲಿ ಹಿರಿಯ ಸಾಧಕರಿಗೆ ಗೌರವಾರ್ಪಣೆ, ಹಿರಿಯ ನಾಗರಿಕರಿಗೆ ವಿವಿಧ ರೀತಿಯ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರ, ಹಿರಿಯರ ಪ್ರತಿಭಾ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಜಾಸ್ ಎನ್‌ಜಿಒ ಅಧ್ಯಕ್ಷೆ ಮಂಗಳಾ ನಂದಕುಮಾರ್ ಅವರು ಪ್ರಸ್ತಾವಿಸಿದರು. ಅಶ್ವಿನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News