ಸುರತ್ಕಲ್: ಕಸ ವಿಲೇವಾರಿ ಕಾರ್ಮಿಕನಿಗೆ ಹಲ್ಲೆ ಖಂಡಿಸಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ ಮುಷ್ಕರ

Update: 2023-10-08 07:48 GMT

ಆರೋಗ್ಯ ಇಲಾಖೆ, ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನಸುರತ್ಕಲ್, ಅ.8: ಮಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನದ ಸಿಬ್ಬಂದಿಗೆ ವ್ಯಕ್ತಿಯೋರ್ವ ಶನಿವಾರ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಕಾರ್ಮಿಕರು ಇಂದು ಕರ್ತವ್ಯಕ್ಕೆ ಹಾಜರಾಗದೆ ಸುರತ್ಕಲ್ ಸಮುದಾಯ ಆರೋಗ್ಯ ಕೇಂದ್ರದ ಮೈದಾನದಲ್ಲಿ ಧರಣಿ ನಡೆಸಿದ್ದಾರೆ‌.

ಕಾರ್ಮಿಕ ರಾಜು ಎಂಬವರಿಗೆ ಮುಕ್ಕ ಎರಡನೇ ವಾರ್ಡ್ ಸದಾಶಿವ ನಗರ ಪಡ್ರೆ ದ್ವಾರದ ಬಳಿ ನಿವಾಸಿ ಕಾರ್ತಿಕ್ ಎಂಬವರು ಶನಿವಾರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ವಿವರ: ಶನಿವಾರ ಕಸ ವಿಲೇವಾರಿ ಸಂದರ್ಭ ಕಸದೊಂದಿಗೆ ಇದ್ದ ಕಬ್ಬಿಣದ ರಾಡ್ ತುಂಡೊಂದನ್ನು ರಾಜು ತೆಗೆದಿದ್ದರು. ಬಳಿಕ ಇದನ್ನು ಹಲ್ಲೆ ಆರೋಪಿ ಕಾರ್ತಿಕ್ ಕೇಳಿದ್ದು, ಅದರಂತೆ ರಾಜು ಹಿಂದಿರುಗಿಸಿ ಕಸ ಸರಬರಾಜು ವಾಹನದಲ್ಲಿ ತೆರಳಿದ್ದರೆನ್ನಲಾಗಿದೆ.

ಈ ವೇಳೆ ಆರೋಪಿಯು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಕಸ ವಿಲೇವಾರಿಯ ವಾಹನವನ್ನು ಅಡ್ಡಗಟ್ಟಿ ರಾಜು ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಗಾಯಾಳು ರಾಜು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಘಟನೆಯನ್ನು ಖಂಡಿಸಿ ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನಗಳ ಸುಮಾರು 300ರಷ್ಟು ಕಾರ್ಮಿಕರು ಇಂದು ಕರ್ತವ್ಯಕ್ಕೆ ಹಾಜರಾಗದೆ ಸುರತ್ಕಲ್ ಸಮುದಾಯ ಆರೋಗ್ಯ ಕೇಂದ್ರದ ಮೈದಾನದಲ್ಲಿ ಸೇರಿ ಪ್ರತಿಭಟನೆ ಆರಂಭಿಸಿದರು. ಬಳಿಕ ಆರೋಪಿಯ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಠಾಣೆಗೆ ಕರೆಸಿದ ಪೊಲೀಸರು ಆತನಿಂದ ಮುಚ್ಚಳಿಗೆ ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಕಾರ್ಮಿಕ ಸಂಘದ ಮುಖಂಡರು ಹಾಗೂ ಆರೋಗ್ಯ ಇಲಾಖೆಯ ಮನವಿಯ ಮೇರೆಗೆ ಕಾರ್ಮಿಕರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರು.

ಈ ಸಂದರ್ಭ ಹೆಲ್ತ್ ಆಫೀಸರ್ ಮಂಜಯ್ಯ ಶೆಟ್ಟಿ, ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ಆರೋಗ್ಯ ಇಲಾಖೆಯ ಕಿರಣ್, ಅರುಣ್, ರಕ್ಷಿತಾ, ರೋಷನ್, ಶ್ರವಣ್, ಯೊಗೀಶ್, ಚೇತನ್, ಆ್ಯಂಟನಿ ಸಂಸ್ಥೆಯ ಮ್ಯಾನೇಜರ್ ಅಭಿಲಾಶ್, ಸೂಪರ್ ವೈಸರ್ ಸುಭಾಷ್ ಮೊದಲಾದವರಿದ್ದರು. 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News