ಇನ್ನೂ ಸುರತ್ಕಲ್ ರೈಲ್ವೇ ಸೇತುವೆ ಕಾಮಗಾರಿ ಆರಂಭವಾಗಿಲ್ಲ: ಸಾರ್ವಜನಿಕರು
ಸುರತ್ಕಲ್: ಗಣೇಶ ಚತುರ್ಥಿ ಕಳೆದು 15 ದಿನಗಳಾಗುತ್ತಾ ಬಂದರೂ ಇನ್ನೂ ಸುರತ್ಕಲ್ ರೈಲ್ವೇ ಸೇತುವೆ ಕಾಮಗಾರಿ ಆರಂಭವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಬೆಳೆಯುತ್ತಿರುವ ಸುರತ್ಕಲ್ ನಗರದಲ್ಲಿರುವ ರೈಲ್ವೇ ಮೇಲ್ಸೇತುವೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಸಾರ್ವಜನಿಕರನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆ ಕೈಗೊಳ್ಳುವುದಾಗಿ ಎಸ್ ಡಿಪಿಐ ಪಕ್ಷ ಸೇತುವೆಯ ಬಳಿ ಬ್ಯಾನರ್ ಅಳವಡಿಸಿ ಆಡಳಿತ ಯಂತ್ರ ಮತ್ತು ರೈಲ್ವೇ ಇಲಾಖೆಗೆ ಎಚ್ಚರಿಕೆಯನ್ನೂ ನೀಡಿತ್ತು.
ಇವೆಲ್ಲದರ ಪರಿಣಾಮವಾಗಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ವಿಚಾರದಲ್ಲಿ ನುಣುಚಿಕೊಳ್ಳುತ್ತಿದ್ದ ಕೊಂಕಣ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಅನುಮತಿ ನೀಡುವ ಜೊತೆಗೆ 78ಲಕ್ಷ ರೂ. ಅನುದಾನವನ್ನೂ ಮೀಸಲಿಟ್ಟಿತ್ತು. ಆ ಬಳಿಕ ಸೆ. 3ರಂದು ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಮನಪಾ ಸುರತ್ಕಲ್ ವಲಯ ಕಚೇರಿಯಲ್ಲಿ ಮನಪಾ ಸದಸ್ಯರು, ರೈಲ್ವೇ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಿತ ಸಂಬಂಧಿಸಿದ ಅಧಿಕಾರಿಗಳು ಸಭೆ ನಡೆಸಿದ್ದರು.
ಸಭೆಯಲ್ಲಿ ರೈಲ್ವೆ ಮೇಲ್ಸೇತುವೆ ಕಾಂಕ್ರೀಟ್ ಕಾಮಗಾರಿ ನಡೆಸುವುದು, ಮೇಲ್ಸೇತುವೆಯಿಂದ ಚೊಕ್ಕಬೆಟ್ಟು ಕ್ರಾಸ್ ವರೆಗೆ ಉತತ್ಮ ಗುಣಮಟ್ಟದ ಚರಂಡಿ ನಿರ್ಮಾಣ ಮಾಡುವುದಾಗಿ ರೈಲ್ವೇ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ತೆ ಕಲ್ಪಿಸುವ ಕರಿತು ಮಂಗಳೂರು ಉತ್ತರ ಸಂಚಾರ ವಿಭಾಗದ ಎಸಿಪಿ ನಜ್ಮಾ ಅವರು ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಗಣೇಶ ಚತುರ್ಥಿ ಹಬ್ಬದ ಬಳಿಕ ಕಾಮಗಾರಿ ಆರಂಭಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬ ನಡೆದು 12ದಿನಗಳು ಕಳೆದರೂ ಇನ್ನೂ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ಕೆಲಸ ಗಳು ಆರಂಭಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದು, ಶೀಘ್ರ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.