ಸುರತ್ಕಲ್| ಪೊಲೀಸ್ ಉಪ ಆಯುಕ್ತರ ಎದುರಲ್ಲೇ ರಸ್ತೆ ಬಂದ್ ಮಾಡಿ ಫುಡ್ ಫೆಸ್ಟ್, ಸಂಗೀತ ರಸಮಂಜರಿ
ಸುರತ್ಕಲ್: ಯಾವುದೇ ಅನುಮತಿ ಪಡೆಯದೇ ಕೃಷ್ಣಾಪುರ - ಮಂಗಳೂರು ಮುಖ್ಯ ರಸ್ತೆಯ ಒಂದು ಪಾಶ್ವವನ್ನು ಬಂದ್ ಮಾಡಿ ಖಾಸಗಿ ಪ್ರತಿಷ್ಠಾನವೊಂದು ರಸ್ತೆಯಲ್ಲೇ ಆಯೋಜಿಸಿದ್ದ ಫುಡ್ ಫೆಸ್ಟ್ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮವು ಪಣಂಬೂರು ಉಪ ವಿಭಾಗದ ಪೊಲೀಸ್ ಆಯುಕ್ತರ ಎದುರಲ್ಲೇ ನಡೆದಿರುವುದು ಬೆಳಕಿಗೆ ಬಂದಿದೆ.
ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಸುರತ್ಕಲ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಅವರ ಕರಾವಳಿ ಸೇವಾ ಪ್ರತಿಷ್ಠಾಣ ವತಿಯಿಂದ ನ.2 ಮತ್ತು 3ರಂದು ಸುರತ್ಕಲ್ ಪೇಟೆಯಲ್ಲಿ ಫುಡ್ ಫೆಸ್ಟ್ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನುಮತಿ ಕೇಳಿ ಸಂಘಟಕರು ಸುರತ್ಕಲ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಮೇಲಾಧಿಕಾರಿಗಳಿಗೆ ರವಾನಿಸಲಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಿಂದ ಅನುಮತಿ ನೀಡಲಾಗಿಲ್ಲ ಎಂದು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ವಾರ್ತಾಭಾರತಿಗೆ ಮಾಹಿತಿ ನೀಡಿದ್ದರು.
ಆದರೆ, ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಪಣಂಬೂರು ಉಪ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಶ್ರೀಕಾಂತ್ ಕೆ., ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಕೆಎಸ್ ಆರ್ ಪಿಯ ಒಂದು ತುಕಡಿಯಿಂದ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ. ಯಾವುದೇ ಅನುಮತಿ ನೀಡದಿದ್ದರೂ ಪೊಲೀಸರು ಕಾರ್ಯಕ್ರಮವನ್ನು ರದ್ದು ಪಡಿಸುವ ಬದಲು ತಾವೇ ಸ್ವತಹಾ ಸ್ಥಳದಲ್ಲಿದ್ದು, ಭದ್ರತೆ ಒದಗಿಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗೀತ ರಸಮಂಜರಿ ಕಾರ್ಯಕ್ರಮಕ್ಕಾಗಿ ಸುರತ್ಕಲ್ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ಟೇಜ್ ಹಾಕಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೃಷ್ಣಾಪುರ- ಕಾನ - ಮಂಗಳೂರು ಮುಖ್ಯ ರಸ್ತೆಯಲ್ಲೇ ಸ್ಟೇಜ್ ಹಾಕಿ ಕಾರ್ಯಕ್ರಮ ನಡೆಸಲಾಗಿದೆ. ಮೈಕ್ ಬಳಸಲು, ಡಿಜೆ ಬಳಕೆಗೆ ಪೊಲೀಸ್ ಇಲಾಖೆಯಿಂದ, ರಸ್ತೆ ಬಂದ್ ಮಾಡುವ ಕುರಿತಾಗಿ ಸಂಚಾರ ಪೊಲೀಸ್ ಇಲಾಖೆಯಿಂದ ಮತ್ತು ಸಾರ್ವಜನಿಕ ರಸ್ತೆಯನ್ನು ಬಳಸಿಕೊಳ್ಳುವ ಕುರಿತು ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದುಕೊಳ್ಳದೇ ನಡೆಸಲಾಗಿದ್ದ ಕಾರ್ಯಕ್ರಮದ ವಿರುದ್ಧ ಸಾರ್ವಜನಿಕರು ಎತ್ತಿದ್ದ ಆಕ್ಷೇಪವನ್ನು varthabharati.in ನ್ಯೂಸ್ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ನ.3ರಂದು ನಡೆಯಲಿದ್ದ ಸಂಗೀತ ರಸವಂಜರಿ ಕಾರ್ಯಕ್ರಮವನ್ನು ಸಮೀಪದ ಖಾಸಗಿ ಕಾಲೇಜು ಒಂದರ ಆವರಣಕ್ಕೆ ಸ್ಥಳಾಂತರಿಸಿದೆ. ಇನ್ನು ಫುಡ್ ಪೆಸ್ಟ್ ಅನ್ನು ರಸ್ತೆ ಬಂದ್ ಮಾಡಿಯೇ ನಡೆಸಲಾಗುತ್ತಿದೆ.