ಸ್ವಾಮಿ ವಿವೇಕಾನಂದ ಸ್ವಾಭಿಮಾನದ ಸಂಕೇತ: ಯು.ಟಿ.ಖಾದರ್

Update: 2024-09-13 13:01 GMT

ಮಂಗಳೂರು: ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರು ಸ್ವಾಭಿಮಾನದ ನಿಜವಾದ ಸಂಕೇತ. ಅವರ ಆದರ್ಶವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ವಿಧಾಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನ ರಾಮಕೃಷ್ಣ ಮಿಷನ್‌ನಲ್ಲಿ ಶುಕ್ರವಾರ ನಡೆದ ‘ಮೇಧಾ ’- ಪದವಿ ವಿದ್ಯಾರ್ಥಿಗಳ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಸಮುದಾಯ ಬಲಿಷ್ಠವಾದಾಗ ಮಾತ್ರ ದೇಶ ಸುಭದ್ರವಾಗಿರಲು ಸಾಧ್ಯ ಎಂದರು.

ವ್ಯಕ್ತಿತ್ವ ಬೆಳವಣಿಗೆಗೆ ಮೌಲ್ಯ ಶಿಕ್ಷಣ ಅಗತ್ಯ. ದೇಶದ ಘನತೆ ಹೆಚ್ಚಿಸಿದ ಮಹಾತ್ಮರ ಆದರ್ಶಗಳು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿ. ಆದ್ದರಿಂದ ವಿದ್ಯಾರ್ಥಿಗಳು ದೇಶದ ಕಲ್ಪನೆಯೊಂದಿಗೆ ಸದ್ವಿಚಾರಗಳೊಂದಿಗೆ ಮುನ್ನಡೆಯಬೇಕು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶವನ್ನು ಅಥೈಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.

ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪ ದೀಕ್ಷಿತ್ ರೈ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ನಡೆಯಿತು. ಕಾನ್ಪುರದ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಶ್ರದ್ಧಾನಂದಜಿ ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಸಂದೀಪ್ ವಸಿಷ್ಠ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಉಡುಪಿಯ ಡಾ. ಎಂ. ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಮಂಗಳೂರಿನ ಚೇರ್ ಸ್ಟುಡಿಯೋದ ಮಾಲಕ ರಾಘವೇಂದ್ರ ನೆಲ್ಲಿಕಟ್ಟೆ ಭಾಗವಹಿಸಿದರು.

ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು. ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News