ತಲಪಾಡಿ: ಅಂತಾರಾಜ್ಯ ಅಕ್ರಮ ಸಾರಾಯಿ ದಂಧೆ ಬಯಲಿಗೆ: ಮೂವರು ವಶಕ್ಕೆ, ಓರ್ವ ಪರಾರಿ

Update: 2023-12-13 05:05 GMT

ಉಳ್ಳಾಲ, ಡಿ.13: ಗಡಿಭಾಗವಾದ ತಲಪಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಸಾರಾಯಿ ದಂಧೆ ಜಾಲವೊಂದನ್ನು ಮಂಗಳವಾರ ತಡರಾತ್ರಿ ಪತ್ತೆಹಚ್ಚಿರುವ ಅಬಕಾರಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ಸಂದರ್ಭ ತಲಪಾಡಿ ಮಸೀದಿ ಬಳಿಯ ನಿವಾಸಿ ಸತೀಶ್ ತಲಪಾಡಿ, ಕುಂಜತ್ತೂರು ನಿವಾಸಿಗಳಾದ ನೌಷಾದ್ ಹಾಗೂ ಅನ್ಸೀಫ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಪರಾರಿಯಾಗಿದ್ದಾನೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

ದಾಳಿ ವೇಳೆ ಸತೀಶ್ ತಲಪಾಡಿ ಮನೆಯಿಂದ ಲೀಟರ್ ಗಟ್ಟಲೆ ಸ್ಪಿರಿಟ್ ಹಾಗೂ ಅವುಗಳ ಸಾಗಾಟಕ್ಕೆ ಅನುವಾಗಿದ್ದ ಕಾರು ಹಾಗೂ ಪ್ಯಾಕಿಂಗ್ ಗೆಂದು ದಾಸ್ತಾನಿರಿಸಿದ್ದ ಪ್ಲಾಸ್ಟಿಕ್ ಕ್ಯಾನುಗಳನ್ನು ವಶಕ್ಕೆ ಪಡೆದಿರುವುದಾಗಿ ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ: ಕಿನ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ಯ ಎಂಬಲ್ಲಿ ನಕಲಿ ಸಾರಾಯಿ ಘಟಕ ಕಾರ್ಯಾಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಬಕಾರಿ ಪೊಲೀಸರು ಇಲ್ಲಿನ ನಿತ್ಯಾನಂದ ಭಂಡಾರಿ ಎಂಬಾತನ ಮನೆಗೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಈ ವೇಳೆ 60ಕ್ಕೂ ಅಧಿಕ ಕ್ಯಾನ್ ಗಳಲ್ಲಿ 2,240 ಲೀ ಮದ್ಯಸಾರ, 2022ರ ಅವಧಿ ಪೂರ್ಣಗೊಂಡ ಬಾಟಲಿಗಳಲ್ಲಿ ನಕಲಿ ಸಾರಾಯಿ, ಪಾಸ್ಟಿಕ್ ಪ್ಯಾಕೆಟ್, 222 ಲೀ. ನಕಲಿ ಬ್ರ್ಯಾಂಡಿ ಹಾಗೂ ನಕಲಿ ಸಾರಾಯಿ ಪ್ಯಾಕಿಂಗ್ ನಡೆಸುತ್ತಿದ್ದ ಯಂತ್ರಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭ ಆರೋಪಿ ನಿತ್ಯಾನಂದ ಭಂಡಾರಿ ಪರಾರಿಯಾಗಿದ್ದಾನೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪರ ಲಾಬಿ ನಡೆಸಲು ಬಂದು ಸಿಕ್ಕಿಬಿದ್ದ !

ಈ ನಡುವೆ ನಿತ್ಯಾನಂದ ಭಂಡಾರಿ ಮನೆ ಮೇಲೆ ದಾಳಿ ನಡೆದಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಸತೀಶ್ ತಲಪಾಡಿ ಆರೋಪಿ ಪರವಾಗಿ ಅಬಕಾರಿ ಪೊಲೀಸರ ಜೊತೆ ಲಾಬಿ ನಡೆಸಲು ಮುಂದಾಗಿದ್ದ ಎನ್ನಲಾಗಿದೆ. ಆತನ ನಡವಳಿಕೆಯಿಂದ ಸಂಶಯಗೊಂಡ ಅಬಕಾರಿ ಪೊಲೀಸರು ವಿಚಾರಣೆ ನಡೆಸಿದಾಗ ಆತನು ಇದೇರೀತಿಯ ದಂಧೆ ನಡೆಸುತ್ತಿರುವ ವಿಚಾರ ತಿಳಿದುಬಂತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಡರಾತ್ರಿ ತಲಪಾಡಿಯಲ್ಲಿರುವ ಸತೀಶ್ ತಲಪಾಡಿಯ ಮನೆಗೂ ದಾಳಿ ನಡೆಸಿ ಪರಿಶೀಲಿಸಿದಾಗ ಅಲ್ಲೂ ನಕಲಿ ಸಾರಾಯಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿ ವೇಳೆ 210 ಲೀ. ಸ್ಪಿರಿಟ್ 20 ಲೀ. ನಕಲಿ ಬ್ರ್ಯಾಂಡಿ, 2.34 ಲೀ ನಕಲಿ ಪ್ರೆಸ್ಟೀಜ್ ವಿಸ್ಕಿ, ಕಾರು ಸಹಿತ ಅದರೊಳಗಿದ್ದ 70 ಲೀ ಸ್ಪಿರಿಟ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸತೀಶ್ ತಲಪಾಡಿ, ಆತನ ಸಹಚರರಾದ ನೌಷಾದ್, ಅನ್ಸೀಫ್ ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿ ನಡೆದ ಮನೆಯಿಂದ ಕೇರಳದ ರಾ.ಹೆ.ಯನ್ನು ಒಳಮಾರ್ಗವಾಗಿ ಸಂಪರ್ಕಿಸಲು ಕೇವಲ 1.5 ಕಿ.ಮೀ. ದೂರವಷ್ಟೇ ಕ್ರಮಿಸಬೇಕಿದೆ. ಇದೇ ದಾರಿಯಾಗಿ ಹಲವು ವರ್ಷಗಳಿಂದ ಅಂತಾರಾಜ್ಯವಾಗಿ ಈ ದಂಧೆ ನಡೆಯುತ್ತಿರುವ ಶಂಕೆಯನ್ನು ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡ ವ್ಯಕ್ತಪಡಿಸಿದೆ.

ಈ ಕಾರ್ಯಾಚರಣೆಯು ಅಬಕಾರಿ ಇಲಾಖೆಯ ಮಂಗಳೂರು ವಿಭಾಗದ ಉಪ ಅಧೀಕ್ಷಕ ಸೈಯದ್ ತಫ್ಝೀಲುಲ್ಲಾ ಮಾರ್ಗದರ್ಶನದಲ್ಲಿ ಅಬಕಾರಿ ಮಂಗಳೂರು ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ಟಿ., ದಕ್ಷಿಣ ವಲಯ-೨ ಅಬಕಾರಿ ಇಲಾಖೆಯ ನಿರೀಕ್ಷಕಿ ಕಮಲಾ ಎಚ್.ಎನ್. ನೇತೃತ್ವದಲ್ಲಿ ನಡೆದಿದೆ.

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News