‘ಮೈತ್ರಿಗೆ ಮೊದಲು ಜೆಡಿಎಸ್‍ನ ಎಂಎಲ್‍ಎ, ಎಂಎಲ್ಸಿಗಳ ಜೊತೆ ಮಾತುಕತೆ ನಡೆಸಲಾಗಿದೆ’

Update: 2023-10-09 17:54 GMT

ಸುಬ್ರಹ್ಮಣ್ಯ: ಎನ್‍ಡಿಎ ಜತೆ ಮೈತ್ರಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಮೊದಲಾಗಿ ಜೆಡಿಎಸ್‍ನ 19 ಎಂಎಲ್‍ಎ, 8 ಎಂಎಲ್‍ಸಿಗಳು, ಪಕ್ಷದ ಅಧ್ಯಕ್ಷ ಇಬ್ರಾಹಿಂ ಅವರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿ, ಬಳಿಕ ಕುಮಾರಸ್ವಾಮಿ ಅವರು ಗೃಹ ಮಂತ್ರಿಯವರನ್ನು ಭೇಟಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ, ರಾಜ್ಯ ಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅವರು ಹೇಳಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಗೃಹಮಂತ್ರಿ ಜೊತೆ ಮಾತುಕತೆಯಲ್ಲಿ ಹಿಂದಿನ ನಾಲ್ಕು ಚುನಾವಣೆಯ ಮತ ಗಳಿಕೆ ಒಟ್ಟುಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ ಎಂದರು. ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೆ, ದಸರಾ ಕಳೆದು ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ಸೆಸ್ಸನ್ ಕಳೆದು ನನ್ನ ಆರೋಗ್ಯ ಸುಧಾರಿಸಿದರೆ ನಾನು ಅಥವಾ ಕುಮಾರಸ್ವಾಮಿ ಅವರು ಗೃಹಮಂತ್ರಿಗಳ ಜೊತೆ ಚರ್ಚಿಸಲಿದ್ದಾರೆ ಎಂದರು.

ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರಗಳ ಬಗ್ಗೆ ಅಂತಿಮಗೊಂಡಿಲ್ಲ. ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿಯೇ ಇದೆ. ಕಾಂಗ್ರೆಸ್ 28 ಕ್ಷೇತ್ರ ಗೆಲ್ಲುವ ವಿಶ್ವಾಸದಲ್ಲಿದ್ದಾರೆ, ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು. ಜಾತಿ ಆಧಾರದ ಮೇಲೆ ಮತಗಳು ಹೇಗೆ ವಿಭಜನೆ ಆಗುತ್ತದೆ ಎನ್ನುವ ಬಗ್ಗೆ ನಾನು ಇವತ್ತು ವಾದ ಮಾಡಲ್ಲ. ಮತದಾರರ ತೀರ್ಮಾಣ ಹೇಗಿದರಲಿದೆ ನೋಡಬೇಕಷ್ಟೆ ಎಂದರು.

ಐ ಆ್ಯಮ್ 91

ಅದರ ಬಗ್ಗೆ ಚರ್ಚೆ ಮಾಡಲ್ಲ. ನಾನು ಇರೋದು ಬೆಂಗಳೂರಲ್ಲಿ, ನಾನು ಯಾರನ್ನು ಭೇಟಿಯಾಗಿಲ್ಲ. ನಾನು ಎನ್‍ಡಿಎ, ಯುಪಿಎ ಅದರ ಬಗ್ಗೆ ಹೆಚ್ಚು ತಲೆಕೊಂಡಿಲ್ಲ, ಐ ಆ್ಯಮ್ 91 ಕ್ಷಮಿಸಿ ಎಂದು ಪ್ರತಿಕ್ರಿಯೆ ನೀಡಿದರು.

ಸರಕಾರ ಮುಂಜಾಗ್ರತೆ ವಹಿಸಬೇಕಾಗಿತ್ತು

ಶಿವಮೊಗ್ಗ ಘಟನೆ ಬಗ್ಗೆ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ಮಾಧ್ಯಮದಲ್ಲಿ ಬಂದಿರುವುದನ್ನು ಕೇಳಿದ್ದೇನೆ ಹೊರತು ವಾಸ್ತವಾಂಶ ತಿಳಿದಿಲ್ಲ. ಶಿವಮೊಗ್ಗ ಸೆನ್ಸಿಟಿವ್ ಏರಿಯಾ. ಶಿವಮೊಗ್ಗದಲ್ಲಿ ಹಿಂದಿನ ಹಲವಾರು ಘಟನೆಗಳನ್ನು ಗಮನಿಸಿದಾಗ ಇಂತಹ ವಿಷಯಗಳಲ್ಲಿ ಸರಕಾರ ಮುಂಜಾಗ್ರತೆ ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಸೇರಿದಂತೆ ಪ್ರಮುಖರು ಜತೆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News