ವಾಮಂಜೂರು ಅಣಬೆ ತಯಾರಿಕಾ ಘಟಕ ಸ್ಥಳ ಪರಿಶೀಲನೆಗೆ ತೆರಳಿದ ಮೇಯರ್, ಆಯುಕ್ತರಿಗೆ ತರಾಟೆ

Update: 2023-10-19 12:16 GMT

ಮಂಗಳೂರು, ಅ.19: ನಗರ ಹೊರವಲಯದ ವಾಮಂಜೂರಿನಲ್ಲಿರುವ ‘ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ’ ಅಣಬೆ ತಯಾರಿಕಾ ಘಟಕವನ್ನು ಪರಿಶೀಲಿಸುವ ಸಲುವಾಗಿ ಭೇಟಿ ನೀಡಿದ ಮೇಯರ್, ಆಯುಕ್ತರು, ಕಾರ್ಪೊರೇಟರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

ಇದರ ದುರ್ನಾತದಿಂದ ಇಲ್ಲಿ ವಾಸಿಸಲು ಸಾಧ್ಯವಿಲ್ಲ. ಪರಿಸರದ ಹಲವು ಮಂದಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ತಕ್ಷಣ ಈ ಘಟಕವನ್ನು ಮುಚ್ಚಿಸಿ, ಇಲ್ಲದಿದ್ದರೆ ನಾವೇ ಮುಚ್ಚಿಸುವೆವು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಈ ಘಟಕದಿಂದ ದುರ್ನಾತವಿಲ್ಲ ಎಂಬುದಾಗಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದ ಆಯುಕ್ತರನ್ನು ಗ್ರಾಮಸ್ಥರು ತರಾಟೆಗೆ ತೆಗೆದು ಕೊಂಡರು. ಈ ಸಂದರ್ಭ ಮನಪಾ ಆಯುಕ್ತರು ಸಮಜಾಯಿಸಿಕೆ ನೀಡಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ‘ನೀವು ಯಾರ ಪರವಾಗಿ ಬಂದಿದ್ದೀರಿ? ನಾವು ಮನವಿ ಸಲ್ಲಿಸಲು ಬಂದಾಗ ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ. ಒಂದೋ ಇದನ್ನು ಮುಚ್ಚಿಸಿರಿ. ಇಲ್ಲವೇ ನಾವೇ ಮುಚ್ಚಿಸುತ್ತೇವೆ’ ಎಂದರಲ್ಲದೆ, ‘ನಮ್ಮ ಗಾಳಿ-ನಮ್ಮ ಹಕ್ಕು’ ಎಂದು ಘೋಷಣೆ ಕೂಗಿದರು.

ಅಲ್ಲದೆ ಮೇಯರ್ ಮತ್ತು ಆಯುಕ್ತರನ್ನು ಆಶ್ರಯ ಕಾಲನಿಗೆ ಕರೆದೊಯ್ದು ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ ಗ್ರಾಮಸ್ಥರು ಘಟಕದ ಮಾಲಕರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News