ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ಮೊದಲ ಆದ್ಯತೆ: ಸಚಿವ ಬೋಸರಾಜು
ಉಪ್ಪಿನಂಗಡಿ: ಕಳೆದ ಸರಕಾರವಿದ್ದಾಗ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಮಂಜೂರಾತಿ ಪಡೆದ 12,692 ಕೋಟಿ ರೂ.ನ ಕಾಮಗಾರಿಗಳು ಈಗಲೂ ಕೆಲಸದ ಹಂತದಲ್ಲಿವೆ. ಅದನ್ನು ಸಂಪೂರ್ಣಗೊಳಿಸಿ ಜನತೆಗೆ ಅದರ ಉಪಯೋಗ ಸಿಗುವ ಹಾಗೆ ಮಾಡಿದ ಬಳಿಕವೇ ನೂತನ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಬಿಳಿಯೂರು ಎಂಬಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ವೀಕ್ಷಿಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಒಂದು ಸರಕಾರ ಆಡಳಿತ ನಡೆಸುವ ಐದನೇ ವರ್ಷದಲ್ಲಿ ಅವುಗಳ ಮೇಲೆ ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಒತ್ತಡಗಳು ಜಾಸ್ತಿ ಇರುತ್ತವೆ. ಇದರಿಂದಾಗಿ ನಮ್ಮ ಇಲಾಖೆ ಯಡಿ ಅತೀ ಹೆಚ್ಚು ಕಾಮಗಾರಿಗಳು ಆ ವರ್ಷದಲ್ಲಿ ಮಂಜೂರಾತಿ ಪಡೆದಿರುತ್ತವೆ. ಈಗಲೂ ಈ ಹಿಂದೆ ಮಂಜೂರಾತಿ ಪಡೆದ 12,692 ಕೋಟಿ ರೂ.ನ ಕಾಮಗಾರಿಗಳ ಕೆಲಸ ನಡೆಯುತ್ತಿವೆ. ಇನ್ನು ಕೆಲವು ಕಾಮಗಾರಿಗಳು ಸ್ಥಗಿತಗೊಂಡಿವೆ. ಇಂತಹ ಕಾಮಗಾರಿಗಳು ಪೂರ್ಣಗೊಂಡರೇ ಮಾತ್ರ ಇದರಿಂದ ಜನತೆಗೆ ಪ್ರಯೋಜನ ಸಿಗಲಿದೆ. ಆದ್ದರಿಂದ ವರ್ಷ ದೊಳಗೆ ಅಂತಹ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಆ ಬಳಿಕ ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗುವುದು. ಬಿಳಿಯೂರಿನಲ್ಲಿ ಕಿಂಡಿ ಅಣೆಕಟ್ಟಿನ ಕೆಲಸ ಪೂರ್ಣವಾಗಿದ್ದು, ಸಂಪರ್ಕ ರಸ್ತೆ ಆಗಬೇಕಿದೆ. ಇದಕ್ಕಾಗಿ ಜಾಗದ ಅವಶ್ಯಕತೆಯಿದೆ. ಹಾಗಾಗಿ ಇಲ್ಲಿನ ಸ್ಥಳೀಯರಲ್ಲಿ ಮಾತನಾಡಿ ಅವರಿಗೆ ಸೂಕ್ತ ಪರಿಹಾರ ನೀಡಿ ರಸ್ತೆಗಾಗಿ ಜಾಗವನ್ನು ಸ್ವಾಧೀನ ಪಡೆಯಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಇದು ತುರ್ತಾಗಿ ನಡೆಯಲಿದೆ. ಮುಂದಕ್ಕೆ ಶಾಸಕರು ಅನುದಾನ ಒದಗಿಸಿ ಈ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಸಲಿದ್ದಾರೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈ ಭಾಗದ ಮಳೆಯ ತೀವೃತೆ, ನದಿ ನೀರಿನ ಮಟ್ಟವನ್ನು ನೋಡಿಕೊಂಡು ಕಿಂಡಿ ಅಣೆಕಟ್ಟಿಗೆ ಗೇಟ್ ಅಳವಡಿಸುವ ಕಾರ್ಯವನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ ಮತ್ತಿತರರು ಇದ್ದರು.
ಉಪ್ಪಿನಂಗಡಿಯ ಸಂಗಮ ಕ್ಷೇತ್ರವನ್ನು ಕೂಡಲ ಸಂಗಮದಂತೆ ಪ್ರವಾಸೋದ್ಯಮ ಕ್ಷೇತ್ರ ಮಾಡಬೇಕೆಂಬ ಶಾಸಕ ಅಶೋಕ್ ಕುಮಾರ್ ಕನಸಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, 350 ರೂ. ಕೋಟಿಯ ಯೋಜನೆಯನ್ನು ತಯಾರಿಸಿ ಶಾಸಕ ಅಶೋಕ್ ಕುಮಾರ್ ರೈಯವರು ಈಗಾಗಲೇ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಈಗ ನಮ್ಮ ಇಲಾಖೆಗೆ ಬಂದಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದ ಬಳಿಕ ಈ ಯೋಜನೆಯನ್ನು ಅನುಷ್ಠಾನಿಸಲಾಗುವುದು ಎಂದರು.
ಈ ಸಂದರ್ಭ ಸಚಿವರಿಗೆ ಈ ಯೋಜನೆಯ ಬಗ್ಗೆ ವಿವರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಾರ್ಥಿಗಳು ಬರುತ್ತಿದ್ದು, ಅಲ್ಲಿಗೆ ಬರುವವರು ಇಲ್ಲಿಗೂ ಬಂದು ಹೋಗುತ್ತಾರೆ. ಅಲ್ಲದೆ ಎರಡೂ ನದಿಗಳು ಸಂಗಮವಾಗುವ ಈ ಜಾಗ ಸದ್ಗತಿದಾಯಕ ಸ್ಥಳವಾಗಿದೆ. ಆದ್ದರಿಂದ ಇಲ್ಲಿ ಒಂದು ಕಿಂಡಿ ಅಣೆಕಟ್ಟು ನಿರ್ಮಿಸಿ, ಬಳಿಕ ನದಿ ಗರ್ಭದಲ್ಲಿರುವ ಉದ್ಭವಲಿಂಗದ ಬಳಿ ವರ್ಷದ ಎಲ್ಲಾ ದಿನಗಳಲ್ಲೂ ಹೋಗಿ ಪೂಜೆ ನಡೆಸಲು ಅವಕಾಶವಾಗುವ ಹಾಗೆ ಇಲ್ಲಿ ಕೂಡಲಸಂಗಮದ ಹಾಗೆ ಯೋಜನೆಯನ್ನು ಅನುಷ್ಠಾನಿಸಬೇಕು. ಇದರಿಂದ ಇದು ಪ್ರವಾಸೋದ್ಯಮ ಕ್ಷೇತ್ರವಾಗಿ ಬದಲಾಗುವುದಲ್ಲದೆ, ಅಂತರ್ಜಲದ ಅಭಿವೃದ್ಧಿಯೂ ಆಗುತ್ತದೆ ಎಂದರಲ್ಲದೆ, ನೀವು ಖುದ್ದು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಶಾಸಕರ ಮನವಿಗೆ ಓಗೊಟ್ಟ ಸಚಿವರು ಬಳಿಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಬಂದು ನದಿಗಳ ವೀಕ್ಷಣೆ ನಡೆಸಿದರು.