ಮಕ್ಕಳಲ್ಲಿ ಡಿಜಿಟಲ್ ಸುರಕ್ಷತೆಗೆ ಕಾಳಜಿ ಅಗತ್ಯ: ಪ್ರಸೂನ್ ಸೆನ್

ಮಂಗಳೂರು: ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚು ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದಾರೆ. ಅವರು ಬೇಗನೆ ಆನ್‌ಲೈನ್‌ಗೆ ಪ್ರವೇಶಿಸುತ್ತಿದ್ದಾರೆ. ಇದರಿಂದಾಗಿ ಅವರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಮಕ್ಕಳನ್ನು ಅಪಾಯದಿಂದ ಪಾರು ಮಾಡಲು ಡಿಜಿಟಲ್ ಸುರಕ್ಷತೆ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಯುನೆಸೆಫ್ ಹೈದರಾಬಾದ್ ಕಚೇರಿಯ ಮುಖ್ಯಸ್ಥ ಪ್ರಸೂನ್ ಸೆನ್ ಹೇಳಿದ್ದಾರೆ.
ನಗರದ ಸಂತ ಅಲೋಶಿಯಸ್ ಪರಿಗಣಿತ ವಿವಿಯ ಸಾನಿಧ್ಯ ಸಭಾಂಗಣದಲ್ಲಿ ಗುರುವಾರ ಮೈಸೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಯುನಿಸೆಫ್ ಹೈದಾರಾಬಾದ್ ಹಾಗೂ ಸಂತ ಅಲೋಶಿಯಸ್ ಡೀಮ್ಡ್ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಆಯೋಜಿಸಲಾದ ‘ ಮಕ್ಕಳ ಹಕ್ಕುಗಳು, ಸಾಂಕ್ರಾಮಿಕವಲ್ಲದ ರೋಗಗಳು, ಮಾನಸಿಕ ಆರೋಗ್ಯ ಮತ್ತು ಡಿಜಿಟಲ್ ಸುರಕ್ಷತೆ ’ ವಿಚಾರದಲ್ಲಿ ಆಯೋಜಿಸಲಾದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಹೆತ್ತವರು ವಿಶೇಷ ಕಾಳಜಿ ವಹಿಸಬೇಕಾಗಿದೆ. ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಸಾಧಕ-ಬಾಧಕಗಳ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದವರು ಹೇಳಿದರು.
ಸಂತ ಅಲೋಶಿಯಸ್ ಪರಿಗಣಿತ ವಿವಿ ರಿಜಿಸ್ಟ್ರಾರ್ ಡಾ.ರೊನಾಲ್ಡ್ ನಜರತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಸಮಾಜದ ನೈಜತೆ ಅರಿಯುವ ಶಿಕ್ಷಣ ನೀಡಬೇಕಾಗಿದೆ. ವ್ಯಕ್ತಿತ್ವ ನಿರ್ಮಾಣದ ಕಡೆಗೆ ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ ಎಂದರು.
ಪತ್ರಕರ್ತರ ಮೂಲಕ ಜನಜಾಗೃತಿ ಮೂಡಿಸಲು ಮಕ್ಕಳ ಹಕ್ಕುಗಳ ಬಗ್ಗೆ ಪತ್ರಕರ್ತರಿಗೆ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ. ವಿದ್ಯಾರ್ಥಿ ಗಳಿಗೂ ಇದರಿಂದ ಪ್ರಯೋಜನವಾಗಲಿದೆ ಎಂದು ನುಡಿದರು.
ಮೈಸೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಸಪ್ನಾ ಎಂ.ಎಸ್. ಪ್ರಸ್ತಾವನೆಗೈದರು. ಸಂತ ಅಲೋಶಿಯಸ್ ಡೀಮ್ಡ್ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ ವಂದಿಸಿದರು. ಮಂಜು ಸುಬೇದಾರ್ ಕಾರ್ಯಕ್ರಮ ನಿರೂಪಿಸಿದರು.
*ಸಮರ್ಪಕವಾಗಿ ಮಕ್ಕಳ ಹಕ್ಕುಗಳ ಪಾಲನೆಯಾಗಲಿ: ಕಾರ್ಯಗಾರದಲ್ಲಿ ಮಾಹಿತಿ ನೀಡಿದ ಪಡಿ ಸಂಸ್ಥೆಯ ಸಿಇಒ ರೆನ್ನಿ ಡಿಸೋಜ ಅವರು ಹದಿನೆಂಟು ವರ್ಷಕ್ಕಿಂತ ಕೆಳಗಿನವರನ್ನು ಮಕ್ಕಳೆಂದು ಪರಿಗಣಿಸಲಾಗುತ್ತದೆ. ಮಕ್ಕಳ ರಕ್ಷಣೆಗೆ ದೇಶದಲ್ಲಿ ಹಲವಾರು ಕಾನೂನು, ಕಾಯ್ದೆಗಳಿವೆ. ಮಕ್ಕಳ ಹಕ್ಕುಗಳನ್ನು ಪ್ರಮುಖವಾಗಿ ನಾಲ್ಕು ವಿಭಾಗಳಾಗಿ ವಿಂಗಡಿಸಬಹುದು . ಯಾರಿಗೂ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ, ತಡೆ ಹಿಡಿಯುವ ಅಧಿಕಾರ ಇಲ್ಲ. ಮಾಧ್ಯಮ ವರದಿಗಾರರು ಸುದ್ದಿ ಬರವಣಿಗೆಯಲ್ಲಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ಎಚ್ಚರ ವಹಿಸಬೇಕಾಗಿದೆ. ಮಕ್ಕಳ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಅದರ ಪಾಲನೆ ಮಾಡಬೇಕು. ಮನೆಯಿಂದಲೇ ಮಕ್ಕಳ ಹಕ್ಕುಗಳ ರಕ್ಷಣೆಯಾಗಲಿ ಎಂದು ಹೇಳಿದರು.ಯುನಿಸೆಫ್ ಆಂಧ್ರಪ್ರದೇಶ, ತೆಲಂಗಾನ ಮತ್ತು ಕರ್ನಾಟಕ ಕಚೇರಿಯ ಆರೋಗ್ಯ ತಜ್ಞ ಡಾ.ಶ್ರೀಧರ್ ಪ್ರಹ್ಲಾದ್ ರಾಯವಾಂಕಿ ಅವರು ‘ಮಕ್ಕಳ ಆರೋಗ್ಯ ಸಮಸ್ಯೆ ಹೆಚ್ಚಳ’ ವಿಷಯದಲ್ಲಿ ವಿಚಾರ ಮಂಡಿಸಿದರು.
ಎರಡನೇ ದಿನವಾಗಿರುವ ಶುಕ್ರವಾರ ‘ಮಕ್ಕಳು ಸಾಮಾನ್ಯವಾಗಿ ಎದುರಿಸುವ ಮಾನಸಿಕ ಸಮಸ್ಯೆಗಳ ಬಗ್ಗೆ ಅನ್ವೇಷಣಮ್ ಸಂಸ್ಥೆಯ ಸ್ಥಾಪಕರಾದ ಸಚಿತ ನಂದಗೋಪಾಲ್ ಮತ್ತು ಮಕ್ಕಳಿಗೆ ಡಿಜಿಟಲ್ ಸುರಕ್ಷತೆಯ ಬಗ್ಗೆ ಮೈಸೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಸಪ್ನಾ ಎಂ.ಎಸ್. ವಿಚಾರ ಮಂಡಿಸುವರು.