ಉಜಿರೆ | ಪೊಕ್ಸೊ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2023-11-19 06:08 GMT

ಬೆಂಗಳೂರು: 'ಬೆಳ್ತಂಗಡಿ ತಾಲೂಕಿನ ಉಜಿರೆಯ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲೆಯ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಈ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ' ಎಂದು 'ನೈಜ ಹೋರಾಟಗಾರರ ವೇದಿಕೆ' ಆರೋಪಿಸಿದೆ. 

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿರುವ 'ನೈಜ ಹೋರಾಟಗಾರರ ವೇದಿಕೆ', ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. 

ಪತ್ರದ ಸಾರಾಂಶ: 

''ವಿದ್ಯಾರ್ಥಿನಿ ಐದು ತಿಂಗಳ ಗರ್ಭಿಣಿಯಾದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆಯಿಂದ ವಿಟ್ಲ ಠಾಣೆಯ ಮಹಿಳಾ ಪೊಲೀಸರು ಹೇಳಿಕೆಯನ್ನು ಪಡೆದಿದ್ದಾರೆ. ಈ ವೇಳೆ ಆಕೆ ತನ್ನ ವಿದ್ಯಾಸಂಸ್ಥೆಯ ಕ್ರೀಡಾ ಶಿಕ್ಷಕ ರಮೇಶ್‌ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾಗಿ ಹೇಳಿಕೆ ನೀಡಿದ್ದಾಳೆ. ಈ ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರ ಜೊತೆಜೊತೆಗೆ ಇನ್ನಷ್ಟು ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದು. ವಿದ್ಯಾರ್ಥಿನಿಯು ಮೊದಲು ಕೊಟ್ಟ ದೂರಿನಲ್ಲಿರುವ ಆರೋಪಿಯ ಹೆಸರನ್ನು ಬದಿಗಿರಿಸಿ, ಸಂತ್ರಸ್ತ ವಿದ್ಯಾರ್ಥಿನಿಯನ್ನು ಕೌನ್ಸಿಲಿಂಗ್ ಗೆ ಒಳಪಡಿಸಿ ಮತ್ತೊಂದು ಹೆಸರನ್ನು ಅವಳಿಂದ ಹೇಳಿಸಿ ಆ ವ್ಯಕ್ತಿಯ ಮೇಲೆ ಮಾತ್ರ ಎಫ್ ಐ ಆರ್ ದಾಖಲಿಸಿ ಅವರನ್ನು ಬಂಧಿಸಲಾಗಿದೆ ಎಂಬ ವ್ಯಾಪಕ ಸುದ್ದಿ ಹರಡುತ್ತಿದೆ'' ಎಂದು 'ನೈಜ ಹೋರಾಟಗಾರರ ವೇದಿಕೆ' ಪತ್ರದಲ್ಲಿ ಉಲ್ಲೇಖಿಸಿದೆ. 

''ಮಂಗಳೂರಿನ ಲೇಡಿ ಘೋಷನ್ ಆಸ್ಪತ್ರೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗೆ ಸಂತ್ರಸ್ತೆ ವಿದ್ಯಾರ್ಥಿನಿ ನೀಡಿದ ಪ್ರಥಮ ಹೇಳಿಕೆ ಮತ್ತು ಪ್ರಥಮ ಮಾಹಿತಿಯ ಪ್ರಕಾರ ಶಾಲೆಯ ಪಿ.ಟಿ.ಶಿಕ್ಷಕ ರಮೇಶ್ ಹೆಸರು ಪ್ರಥಮ ವರ್ತಮಾನ ವರದಿಯಲ್ಲಿ ( FIR ) ದಾಖಲಿಸದೆ ನಂತರ ಸಂತ್ರಸ್ತೆ ವಿದ್ಯಾರ್ಥಿನಿಯನ್ನು ಕೌನ್ಸಿಲಿಂಗ್ ಮಾಡಿದ ಬಳಿಕ ಸಂತ್ರಸ್ತೆ ವಿದ್ಯಾರ್ಥಿನಿಯಿಂದ ಮತ್ತೊಂದು ಹೇಳಿಕೆಯನ್ನು ಪಡೆದು ಕೇಶವ ಎಂಬ ಆರೋಪಿಯ ಮೇಲೆ ಎಫ್ಐಆರ್ ದಾಖಲಾಗಿದೆ. ಎಂಬ ಮಾಹಿತಿ ಬರುತ್ತಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಮೊದಲು ಹೇಳಿದ ಪಿ ಟಿ ಶಿಕ್ಷಕನ ರಮೇಶ್ ಹೆಸರಿನ ಜೊತೆ ಸಂತ್ರಸ್ತೆ ಎರಡನೇ ಬಾರಿ ಹೇಳಿದ ಹೇಳಿಕೆಯಲ್ಲಿನ ಕೇಶವನ ಹೆಸರು ಸೇರಿಸಿ ಎಫ್ ಐ ಆರ್ ದಾಖಲಾಗಬೇಕಾಗಿರೋದು ನ್ಯಾಯಸಮ್ಮತವಾಗಿರುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬರುವ ವರದಿಯ ಪ್ರಕಾರ ಕೇಶವ ಎಂಬ ಹೆಸರಿನ ವ್ಯಕ್ತಿಯ ಮೇಲೆ ಮಾತ್ರ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ''  ಎಂದು ಪತ್ರದಲ್ಲಿ ತಿಳಿಸಲಾಗಿದೆ. 

''ಇದು ಪೊಕ್ಸೊ ಪ್ರಕರಣವಾಗಿರುವುದರಿಂದ ಸಂತ್ರಸ್ತೆ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ತಿಳಿದ ತಕ್ಷಣ ವಿಟ್ಲ ಪೊಲೀಸ್ ಠಾಣೆಯ ಮಹಿಳಾಧಿಕಾರಿ ಸಂತ್ರಸ್ತೆಯನ್ನು ಭೇಟಿಯಾಗಿ ಹೇಳಿಕೆ ಪಡೆದ ನಂತರ ತಕ್ಷಣ ಶೂನ್ಯ ಪ್ರಥಮ ವರ್ತಮಾನ ವರದಿಯನ್ನು (ಝೀರೋ FIR) ದಾಖಲಿಸದೆ ಧರ್ಮಸ್ಥಳ ಪೊಲೀಸ್ ಠಾಣೆಯ WHC ಪ್ರಮೋದಿನಿಯವರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆಎಂದು ಶರ ಬರೆದಿರುವುದು ಪ್ರಾಥಮಿಕ ಹಂತದಲ್ಲಿಯೇ ತನಿಖೆಯಲ್ಲಿ ಎಡವಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ'' ಎಂದು ದೂರಲಾಗಿದೆ. 

''ವಿಟ್ಲ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಧರ್ಮಸ್ಥಳ ಠಾಣೆಯ WHC ಪ್ರಮೋದಿನಿಯವರು ಕೂಡ ಕರ್ತವ್ಯ ಲೋಪ ವ್ಯಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಕರ್ತವ್ಯ ಲೋಪದ ಜೊತೆಗೆ ಸಂತ್ರಸ್ತೆ ವಿದ್ಯಾರ್ಥಿನಿ ಮೊದಲು ನೀಡಿದ ಹೇಳಿಕೆ ಪ್ರಕಾರ ಧರ್ಮಸ್ಥಳ ಠಾಣಾಧಿಕಾರಿಗಳು ಪಿ ಟಿ ಶಿಕ್ಷಕ ರಮೇಶ ಹೆಸರನ್ನು ಪ್ರಥಮ ವರ್ತಮಾನ ವರದಿಯಲ್ಲಿ ದಾಖಲಿಸದೆ ಇದ್ದ ಪಕ್ಷದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರು (ಕಾ.ಸು) ವಿದ್ಯಾ ಕೆಜೆ, ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯ WHC ಪ್ರಮೋದಿನಿ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು'' ಎಂದು ನೈಜ ಹೋರಾಟಗಾರರ ವೇದಿಕೆ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದೆ. 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News