ಕ್ರೈಸ್ತರಿಗೆ ಶೇ. 3ರಷ್ಟು ಉದ್ಯೋಗ- ಶಿಕ್ಷಣದಲ್ಲಿ ಮೀಸಲಾತಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಒತ್ತಾಯ

Update: 2023-10-17 12:55 GMT

ಮಂಗಳೂರು, ಅ. 17: ಕ್ರೈಸ್ತ ಸಮುದಾಯದ ಜನರಿಗೆ ಪ್ರತ್ಯೇಕವಾಗಿ ಶೇ. 3ರಷ್ಟು ಮೀಸಲಾತಿ ನೀಡಬೇಕು ಮತ್ತು ಕ್ರೈಸ್ತ ಸಮುದಾಯದ ಜನರ ಜನಜೀವನದ ಬಗ್ಗೆ ಅವರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಮತ್ತು ಶಿಕ್ಷಣದ ಬಗ್ಗೆ ಸರ್ವೆಯೊಂದನ್ನು ನಡೆಸಬೇಕೆಂದು ಕೇಂದ್ರದ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ರಿಚೆನ್ ಲ್ಹಾಮೋ ಅವರನ್ನು ಮಂಗಳೂರಿನ ಕ್ರೈಸ್ತ ಸಮುದಾಯದ ನಿಯೋಗ ಒತ್ತಾಯಿಸಿದೆ.

ಮಂಗಳೂರಿಗೆ ಭೇಟಿ ನೀಡಿದ್ದ ರಿಚೆನ್ ಲ್ಹಾಮೋ ಅವರನ್ನು ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜಾ ನೇತೃತ್ವದ ನಿಯೋಗ ಅವರು ಭೇಟಿ ಮಾಡಿ ಮನವಿ ಸಲ್ಲಿಸಿತು.

ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಕ್ರೈಸ್ತ ಸಮುದಾಯಕ್ಕೆ ದೇಶದ ಆರ್ಥಿಕ ಸಂಪತ್ತನ್ನು ಸಮಾನವಾಗಿ ಹಂಚುವಂತೆ ಶೇ. 3ರಷ್ಟು ಪ್ರತ್ಯೇಕ ಮೀಸಲಾತಿ ನೀಡುವುದು ಇಂದಿನ ಅಗತ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕ್ರೈಸ್ತ ಸಮುದಾಯಕ್ಕೆ ಸೇರಿದ ಅಧಿಕಾರಿಗಳು, ವಿವಿಧ ಕ್ಷೇತ್ರಗಳಲ್ಲಿ ಇಂದು ಅಧಿಕಾರಿಗಳ ಕೊರತೆಯಿದ್ದು, ಸಮಾಜದಲ್ಲಿ ಅಸಮತೋಲಕ್ಕೆ ಕಾರಣವಾಗಿದೆ. ಈ ಕೊರತೆಯನ್ನು ನೀಗಿಸಲು ರಾಜ್ಯ ಸರಕಾರದ ನೌಕರರರು ಮತ್ತು ಅಧಿಕಾರಿಗಳಲ್ಲಿ ಕ್ರೈಸ್ತ ಸಮೌದಾಯದ ಅಧಿಕಾರಿಗಳು ಬರುವಂತಾಗಲು ಪ್ರತ್ಯೇಕವಾಗಿ ಮೀಸಲಾತಿಯ ಅವಶ್ಯಕತೆಯಿದೆ. ಇಂತಹ ಒಂದು ಕಾನೂನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಕ್ರೈಸ್ತ ಸಮುದಾಯದ ಬೆಳವಣಿ ಗೆಗೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಅದು ಆಧಾರವಾಗುವುದು ಎಂದು ಐವನ್ ಡಿಸೋಜರವರು ಆಯೋಗದ ಸದಸ್ಯರಿಗೆ ಮನವರಿಕೆ ಮಾಡಿದರು.

ಮನವಿ ಸ್ವೀಕರಿಸಿದ ರಿಚೆನ್ ಲ್ಹಾಮೊ ಈ ಬಗ್ಗೆ ದೇಶ ಮತ್ತು ರಾಜ್ಯಗಳಲ್ಲಿ ಪ್ರತ್ಯೇಕ ಮೀಸಲಾತಿ ಬಗ್ಗೆ ತಾನು ಧ್ವನಿಗೂಡಿಸು ವುದಾಗಿ ಮತ್ತು ಇದರ ಬಗ್ಗೆ ಕ್ರಮ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ರಚಿಸಲು ತಾನು ಬೆಂಬಲಿಸುವುದಾಗಿ ತಿಳಿಸಿದರು.

ಮನವಿ ಸಲ್ಲಿಸಿದ ನಿಯೋಗದಲ್ಲಿ ಕ್ಯಾಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ, ಉಪಾಧ್ಯಕ್ಷ ಲಾರೆನ್ಸ್ ಡಿ ಸೋಜ, ಕಾರ್ಯದರ್ಶಿ ವಿಲ್ಮ ಮೊಂತೆರೊ, ಕೋಶಾಧಿಕಾರಿ ಫ್ರಾನ್ಸಿಸ್ ಮೊಂತೆರೊ, ಸಹಕಾರ್ಯದರ್ಶಿ ರೋಶನ್ ಮಾರ್ಟಿಸ್, ಸಹ ಕೋಶಾಧಿಕಾರಿ ಸಂತೋಷ್ ಡಿಸೋಜ, ಮಾಜಿ ರಾಜ್ಯ ಆಯೋಗದ ಸದಸ್ಯರಾದ ಮಾರ್ಸೆಲ್ ಮೊಂತೆರೊ, ಕ್ರೈಸ್ತ ಆಯೋಗದ ಅಧ್ಯಕ್ಷರಾದ ರೆ.ಫಾ.ಜೆ.ಬಿ.ಕ್ರಾಸ್ತ, ಕ್ಯಾಥೊಲಿಕ್ ಸಭೆ ಮಾಜಿ ಅಧ್ಯಕ್ಷ ರೊಲ್ಫಿ ಡಿಸೋಜ, ಸಿ.ಎಸ್.ಐನ ಪ್ರಮುಖರಾದ ರೆ.ಪ್ರಭುರಾಜ್, ಜೊಸ್ಸಿ ಅಮನ್ನ, ಕೀರ್ತನ್, ಜೇಮ್ಸ್ ಪ್ರವೀಣ್, ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News