ವಿನಾಯಕ ಬಾಳಿಗಾ ಕೊಲೆ ಪ್ರಕರಣ: ಜಿಲ್ಲಾ ನ್ಯಾಯಾಲಯಲ್ಲಿ ವಿಚಾರಣೆ
ಮಂಗಳೂರು : ಏಳು ವರ್ಷಗಳ ಹಿಂದೆ ನಗರದಲ್ಲಿ ನಡೆದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಆರಂಭಿಸಿದೆ.
2016ರ ಮಾರ್ಚ್ 21ರಂದು ನಡೆದಿರುವ ವಿನಾಯಕ ಬಾಳಿಗಾ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಮೊದಲ ದಿನದ ವಿಚಾರಣೆಯಲ್ಲಿ ಮೂವರು ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.
ವಿನಾಯಕ ಬಾಳಿಗಾರ ಮನೆಯ ಪಕ್ಕದ ನಿವಾಸಿ ಡಾ.ಸುಬ್ರಾಯ ಪೈ, ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧ ಬಾಳಿಗಾ ಮತ್ತು ಹರ್ಷಾ ವಿ ಬಾಳಿಗಾ ಅವರು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು.
ಮಂಗಳವಾರವೂ ವಿಚಾರಣೆ ಮುಂದುವರಿಯಲಿದ್ದು , 14 ಮಂದಿಯ ಪೈಕಿ ಮೂವರ ಹೇಳಿಕೆ ಪಡೆಯಲಾಗಿದ್ದು, ಎರಡನೇ ದಿನ 9 ಮಂದಿಯ ಹೇಳಿಕೆಯನ್ನು ನ್ಯಾಯಾಯವು ದಾಖಲಿಸಲಿದೆ ಎಂದು ತಿಳಿದು ಬಂದಿದೆ.
ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಬೆಂಗಳೂರಿನ ಹಿರಿಯ ನ್ಯಾಯವಾದಿ ಎಸ್.ಬಾಲಕೃಷ್ಣನ್ ಅವರು ಸರಕಾರಿ ವಿಶೇಷ ಅಭಿಯೋಜಕರಾಗಿದ್ದಾರೆ.
ವಿನಾಯಕ ಬಾಳಿಗಾ ಹತ್ಯಾ ಪ್ರಕರಣದ ವಿಚಾರಣೆ ಈ ವರ್ಷ ಎರಡನೇ ಬಾರಿ ನಡೆಯುತ್ತದೆ. ಈ ಮೊದಲು ಜನವರಿ 3 ಮತ್ತು 4ರಂದು ವಿಚಾರಣೆ ನಡೆದಿತ್ತು.