ಮಣಿಪುರದಲ್ಲಿ ನಡೆದಿರುವುದು ಸರಕಾರಿ ಪ್ರಾಯೋಜಿತ ಹತ್ಯಾಕಾಂಡ: ಶಾಹಿದಾ ತಸ್ಲೀಂ

Update: 2023-07-24 09:39 GMT

ಮಂಗಳೂರು, ಜು. 24: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಸೇರಿದಂತೆ ಕಳೆದ ಎರಡೂವರೆ ತಿಂಗಳಿನಿಂದ ನಡೆದಿರುವುದು ಸರಕಾರಿ ಪ್ರಾಯೋಜಿತ ಹತ್ಯಾಕಾಂಡ. ಅದಕ್ಕೆ ನೇರ ಹೊಣೆ ರಾಜ್ಯ ಮತ್ತು ಕೇಂದ್ರ ಸರಕಾರ ಎಂದು ವುಮೆನ್ ಇಂಡಿಯಾ ಮೂವ್ಮೆಂಟ್ (ಡಬ್ಲುಐಎಂ)ನ ರಾಜ್ಯ ಸಮಿತಿ ಸದಸ್ಯೆ ಶಾಹಿದಾ ತಸ್ಲೀಂ ಆರೋಪಿಸಿದ್ದಾರೆ.

ನಗರದ ಕ್ಲಾಕ್ ಟವರ್ ಬಳಿ ಮಣಿಪುರ ನರಮೇಧ, ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯದ ವಿರುದ್ಧ ವುಮೆನ್ ಇಂಡಿಯಾ ಮೂವ್ಮೆಂಟ್ನ ದ.ಕ. ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಣಿಪುರದಲ್ಲಿ ಈಗಾಗಲೇ ಬಹಿರಂಗಗೊಂಡಿರುವ ಅತ್ಯಾಚಾರ ಪ್ರಕರಣ ಮೇ 4ರಂದು ನಡೆದಿರುವುದು. ರಾಜ್ಯ ಸರಕಾರಕ್ಕೆ ಗಲಭೆ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದಾಗಿದ್ದರೆ, ಕೇಂದ್ರ ಸರಕಾರ ಕ್ರಮ ವಹಿಸಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಪ್ರಧಾನಿ ಕರ್ನಾಟಕದ ಚುನಾವಣಾ ರ್ಯಾಲಿಯಲ್ಲಿ ವ್ಯಸ್ತರಾಗಿದ್ದರು. ಅವರಿಗೆ ಮಣಿಪುರದ ಜನರಿಗಿಂತ ಚುನಾವಣೆ ಗೆಲ್ಲುವುದು ಮುಖ್ಯವಾಗಿತ್ತು. ಬಳಿಕ ವಿದೇಶ ಪ್ರವಾಸ, ಮತ್ತೆ ಕೆಲ ರಾಜ್ಯಗಳಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದರೂ, ಮಣಿಪುರಕ್ಕೆ ಹೋಗುವ ಮನಸ್ಸು ಮಾಡಲಿಲ್ಲ. ಇದಕ್ಕೆ, ಮಹಿಳೆಯರನ್ನು ಎರಡನೆ ದರ್ಜೆಯ ಪ್ರಜೆಗಳಾಗಿ ಕಾಣುವ ಹಾಗೂ ಅತ್ಯಾಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸುವ ಮನಸ್ಥಿತಿಯೇ ಕಾರಣ ಎಂದು ಅವರು ಟೀಕಿಸಿದರು.

ಸರಕಾರಗಳು ಕೋಮು ಸೂಕ್ಷ್ಮ, ಗಲಭೆಗಳಂತಹ ಘಟನೆಗಳು ನಡೆದಾಗ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳು ಹರಡಿ ಸಮಾಜದಲ್ಲಿ ತೊಂದರೆ ಆಗಬಾರದೆಂಬ ಕಾರಣಕ್ಕೆ ಇಂಟರ್ನೆಟ್ ಸ್ಥಗಿತಗೊಳಿಸುತ್ತವೆ ಎಂಬ ಭಾವನೆ ನಮ್ಮಲ್ಲಿತ್ತು. ಆದರೆ, ಮಣಿಪುರದಲ್ಲಿ ಸಿಎಂ ನೀಡಿರುವ ಹೇಳಿಕೆಯಂತೆ ಎರಡು ತಿಂಗಳಿನಿಂದ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಅದಕ್ಕಾಗಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿರುವುದರಿಂದ ಅಲ್ಲಿನ ಸರಕಾರದ ಹೊಣೆಗೇಡಿತನ ಬಹಿರಂಗವಾಗದಂತೆ ಇಂಟರ್ನೆಟ್ ಸ್ಥಗಿತಗೊಳಿಸಿರುವುದು ಸ್ಪಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗುಜರಾತಿನ ನರಮೇಧದ ಆರೋಪಿಗಳನ್ನು ರಕ್ಷಿಸಿದವರು ಮಣಿಪುರದ ಆರೋಪಿಗಳನ್ನು ಶಿಕ್ಷಿಸುತ್ತಾರೆ ಎನ್ನುವುದು ಸಂಶಯಾಸ್ಪದ ಎಂದು ಆತಂಕ ವ್ಯಕ್ತಪಡಿಸಿದ ಶಾಹಿದಾ ತಸ್ಲೀಂ, ಮಹಿಳೆಯರು ತಮ್ಮ ರಕ್ಷಣೆಗಾಗಿ ಆತ್ಮರಕ್ಷಣಾ ಕಲೆಗಳನ್ನು ಕಲಿಯಬೇಕೆಂದು ಕರೆ ನೀಡಿದರು.

ಮಣಿಪುರದಲ್ಲಿ ಇಷ್ಟೆಲ್ಲಾ ದುರ್ಘಟನೆಗಳು ನಡೆದರೂ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿಯವರು ಈವರೆಗೂ ಹೇಳಿಕೆಯೇ ನೀಡಿಲ್ಲ. ಅವರು ತಮ್ಮ ಬಾಯಿಗೆ ಫೆವಿಕ್ವಿಕ್ ಗಮ್ ಹಚ್ಚಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ. ಮಣಿಪುರದ ಬಗ್ಗೆ ಮಾತೆತ್ತಲು ಪ್ರಧಾನಿಗೆ ಎರಡು ತಿಂಗಳು ಬೇಕಾಯಿತು. ಬೇಟಿ ಪಡಾವೊ, ಬೇಟಿ ಬಚಾವೊ ಎಂಬ ಪ್ರಧಾನಿಯವರ ಸ್ಲೋಗನ್ ಬರೀ ಸುಳ್ಳು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಉಪಾಧ್ಯಕ್ಷೆ ಮಿಶ್ರಿಯಾ ಕಣ್ಣೂರು ಆಕ್ರೋಶ ವ್ಯಕ್ತಪಡಿಸಿದರು.

ಡಬ್ಲುಐಎಂ ದ.ಕ. ಜಿಲ್ಲಾಧ್ಯಕ್ಷೆ ನೌರಿನ್ ಆಲಂಪಾಡಿ ಮಾತನಾಡಿ, ಮಣಿಪುರ ಘಟನೆಗೆ ಸಂಬಂಧಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಮಣಿಪುರದ ಸಂಪೂರ್ಣ ಘಟನೆಯನ್ನು ಸುಪ್ರೀಂ ಕೋರ್ಟ್ ಸ್ವಯಂ ಆಗಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಡಬ್ಲುಐಎಂ ದ.ಕ. ಘಟಕದ ಪ್ರಧಾನ ಕಾರ್ಯದರ್ಶಿ ನಿಶಾ ಮೂಡುಶೆಡ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News