ಕಾರ್ಮಿಕರು ಜಾತಿಯ ಹೆಸರಿನಲ್ಲಿ ವಿಭಜನೆಯಾಗಬಾರದು: ಕೆ. ಮಹಾಂತೇಶ್

Update: 2023-08-06 14:20 GMT

ಕಾಪು : ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜಾತಿ ಇಲ್ಲ. ದುಡಿಯುವ ಜನ ಎಲ್ಲಾ ಒಂದೇ ಎಂಬ ನಂಬಿಕೆ ಇದೆ. ಯಾವುದೇ ಸಂದರ್ಭದಲ್ಲೂ ನಮ್ಮಲ್ಲಿ ಜಾತಿಯ ಹೆಸರಿನಲ್ಲಿ ವಿಘಟನೆ ಆಗಬಾರದು. ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವವರ ಬಗ್ಗೆ ಎಚ್ಚರದಿಂದ ಇರಬೇಕು. ಜಾತಿ ಧರ್ಮದ ಹೆಸರಿನಲ್ಲಿ ಹೊಡೆದಾಡಬಾರದು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು.

ಅವರು ರವಿವಾರ ಕಾಪುವಿನಲ್ಲಿ ನಡೆದ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದಿಂದ 19ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರ ಪರವಾದ ಚರ್ಚೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಆಗುತ್ತಿಲ್ಲ. ಬದಲಾಗಿಲ್ಲ ವಿಡಿಯೋ, ಹಿಜಾಬ್, ವ್ಯಾಪಾರ ಇತ್ಯಾದಿಗಳ ಬಗ್ಗೆ ಅನಗತ್ಯ ಚರ್ಚೆ ಆಗುತ್ತಿದೆ. ದುಡಿಯೋ ಜನರು ಜಾತಿ ಧರ್ಮದ ಹೆಸರಿನಲ್ಲಿ ಇರಬಾರದು. ಇಲ್ಲಿ ಎಲ್ಲರೂ ಒಂದೇ. ಕಟ್ಟಡ ಕಾರ್ಮಿಕರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕಾಗಿದೆ ಎಂದರು.

ಕಟ್ಟಡ ಕಾರ್ಮಿಕರ ಹಕ್ಕುಗಳಿಗಾಗಿ, ಸೌಲಭ್ಯಕ್ಕಾಗಿ ಕುಟುಂಬದ ನೆಮ್ಮದಿಯ ಬದುಕಿಗಾಗಿ ಸರಕಾರದ ಸವಲತ್ತುಗಳನ್ನು ಪಡೆಯಲು ಸಂಘಟಿತ ಹೋರಾಟ ಅಗತ್ಯತೆ ಇದೆ. ಈ ಬಗ್ಗ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಶ್ರಮ ಜೀವಿಗಳ ಪರವಾಗಿ ಮಾತನಾಡುವ ಜನಪ್ರತಿನಿಧಿಗಳ ಅಗತ್ಯತೆ ಇದೆ. ಆದರೆ ಇಂದು ಕಾರ್ಮಿಕರು, ಮಹಿಳೆಯರ ಹಾಗೂ ಬಡವರ ಪರವಾಗಿ ಮಾತನಾಡುವ ಬದಲು ಶ್ರೀಮಂತರ ಪರವಾಗಿ ಮಾತನಾಡುವ ಜನಪ್ರತಿನಿಧಿಗಳು ನಮ್ಮನ್ನು ಆಳುತಿದ್ದಾರೆ. ಈ ನಿಟ್ಟಿನಲ್ಲಿ ಜಾಗೃತರಾಗುವ ಮೂಲಕ ಮುಂದಿನ ದಿನಗಳಲ್ಲಿ ಕೆಂಬಾವುಟದ ಮೂಲಕ ಜನಪ್ರತಿನಿಧಿಗಳ ಆಯ್ಕೆಯಾಗಬೇಜಕಾಗಿದೆ ಎಂದರು.

ಬಡವರ ಹಿತದೃಷ್ಟಿಯ ಕಾನೂನು ಜಾರಿಯಾಗುವುದು ಬೀದಿಯಲ್ಲಿ ಮಾತನಾಡಿ ಅಲ್ಲ ನಾವು ಆರಿಸಿ ಕಳಿಸಿದ ಪ್ರಜಾ ಪ್ರತಿನಿಧಿಗಳ ಪ್ರಯತ್ನದಿಂದಾಗಬೇಕಾಗಿದೆ. ಅವರು ಕಾರ್ಮಿಕರ ಪರ ಮಾತನಾಡಬೇಕಾಗಿದೆ. ಕೇಂದ್ರ ಸರಕಾರ ಕಾರ್ಮಿಕರ ಬಗೆಗಿನ ಕೆಲವು ಯೋಜನೆಗಳನ್ನು ರದ್ದು ಮಾಡಲೆತ್ನಿಸಿದೆ. ಸರಕಾರಗಳು ಶ್ರೀಮಂತರ ಪರವಾಗಿದೆ. ಬಡವ ರಿಗೆ ತೊಂದರೆಯಾಗಿದೆ. ಎಲ್ಲಾ ಕಾರ್ಮಿಕರ ಸಂಘಗಳ ಸಂಘಟಿತ ಪ್ರಯತ್ನದಿಂದ ಕಾನೂನನ್ನು ರದ್ದು ಮಾಡಲು ಬಿಡಲಿಲ್ಲ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜಿಲ್ಲೆ ಹಾವೇರಿ, ಅಂದಿನ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಜಿಲ್ಲೆ ಸಹಿತ ವಿವಿದೆಢೆಗಳಲ್ಲಿ ಒಟ್ಟು 45 ಲಕ್ಷ ಮಂದಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ನೋಂದಾಯಿತರಾಗಿದ್ದಾರೆ. ಅತೀ ಹೆಚ್ಚು ನಕಲಿ ನೋಂದಣೆ ಮಾಡಲಾ ಗಿದೆ. ಆದರೆ ಅಷ್ಟೊಂದು ಕಾರ್ಮಿಕರು ಇಲ್ಲ. ನೈಜ ನಿರ್ಮಾಣ ವಲಯದ ಕಾರ್ಮಿಕರ ನೋಂದಾಯಿತವಾಗಿಲ್ಲ. ಇದರಿಂದ ನೈಜ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳು ಇದರಿಂದ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಶೇಖರ ಬಂಗೇರ ವಹಿಸಿದ್ದರು. ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕೋಶಾಧಿಕಾರಿ ರೊನಾಲ್ಡ್ ರಾಜೇಶ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಉಪಾಧ್ಯಕ್ಷ ಉದಯ್ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಗಣೇಶ ನಾಯಕ್, ಕಾಪು ಘಟಕದ ಅಧ್ಯಕ್ಷ ರಾಮ ಸಾಲ್ಯಾನ್, ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್, ಸಾಲಿಗ್ರಾಮ ಶಶಿಕಲ, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ಸಭೆಗೂ ಮುನ್ನ ಕಾಪು ಸರಕಾರಿ ಆಸ್ಪತ್ರೆಯ ಬಳಿಯಿಂದ ಕಾಪು ಪೇಟೆ ಮೂಲಕ ಮೆರವಣಿಗೆ ನಡೆಯಿತು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News