ಯಕ್ಷಗಾನ‌ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಅಗತ್ಯ: ಕೃಷ್ಣ ಜೆ.ಪಾಲೇಮಾರ್

Update: 2023-11-27 13:39 GMT

ಕೊಣಾಜೆ: ಯಕ್ಷಗಾನ‌ ನಮ್ಮ ನಾಡಿನ ಹೆಮ್ಮೆಯ ಕಲೆಯಾಗಿದೆ. ಕಲೆಯನ್ನು ಪ್ರೋತ್ಸಾಹಿಸಿದರೆ ಕಲಾವಿದರನ್ನೂ ಪ್ರೋತ್ಸಾ ಹಿದಂತಾಗುತ್ತದೆ. ಯಕ್ಷಾಂಗಣ ಮಂಗಳೂರು‌ ಸಂಘಟನೆಯು ಕಳೆದ ಹಲವಾರು ವರ್ಷದಿಂದ ಯಕ್ಷಗಾನ ಸೇವೆಯಲ್ಲಿ ತೊಡಗಿಸಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸುತ್ತಾ‌ ಬಂದಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಅವರು ಹೇಳಿದರು.

ಅವರು ಡಾ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾಲಯ, ಯಕ್ಷಾಂಗಣ ಮಂಗಳೂರು, ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಇದರ ಆಶ್ರಯದಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಒಂದು ವಾರಗಳ ಯಕ್ಷಗಾನ ತಾಳಮದ್ದಳೆ ಸಪ್ತಾಹ-2023 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕರುಣಾ ಇನ್ಫ್ರಾ ಪ್ರಾಪರ್ಟೀಸ್ ಇಂಡಿಯಾ ಪ್ರೈ.ಲಿ. ಮಾಲಕ ವಿ.ಕರುಣಾಕರ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾ ಟಿಸಿ ಮಾತನಾಡಿ, 'ಯಕ್ಷಗಾನ ತಾಳಮದ್ದಳೆ ಕೇಳುಗರ ಬುದ್ಧಿಯನ್ನು ಹರಿತಗೊಳಿಸುವ ವಿಶಿಷ್ಟ ಕಲಾ ಪ್ರಕಾರ. ಅದನ್ನು ನಮ್ಮ ಕನ್ನಡದ ನುಡಿ ಹಬ್ಬವಾಗಿ ಹತ್ತು ವರ್ಷಗಳಿಂದ ನವೆಂಬರ್ ತಿಂಗಳಿನಲ್ಲೇ ನಡೆಸಿಕೊಂಡು ಬರುತ್ತಿರುವ ಯಕ್ಷಾಂಗಣ ಕನ್ನಡಿಗರೆಲ್ಲರೂ ಅಭಿಮಾನ ಪಡಬೇಕಾದ ಸಂಸ್ಥೆ. ಇದಕ್ಕೆ ಕಲಾಭಿಮಾನಿಗಳಿಂದ ನಿರಂತರ ಪ್ರೋತ್ಸಾಹ ಲಭಿಸಲಿ' ಎಂದವರು ಹಾರೈಸಿದರು.

ಕಸಪಾ‌ ಮಾಜಿ ರಾಜ್ಯಾಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿ ಗಳಲ್ಲಿ ಎಳವೆಯಲ್ಲಿಯೇ ಧರ್ಮ‌ಸಂರಕ್ಷಣೆಯ ಜಾಗೃತಿಯನ್ನು ಮೂಡಿಸುವ ಕಾರ್ಯ ಆಗಬೇಕಿದೆ. ಪ್ರಮುಖವಾಗಿ ಯಕ್ಷ ಗಾನ ಹಾಗೂ ತಾಳಮದ್ದಳೆಯ ಮೂಲಕ ಪುರಾಣ ಜ್ಞಾನವನ್ನುಅರ್ಥಮಾಡಿಕೊಂಡು ಮುನ್ನಡೆಯಲು ಸಾಧ್ಯವಾ ಗುತ್ತದೆ. ಆದ್ದರಿಂದ ಮಕ್ಕಳು ಹಾಗೂ ಯುವ ಸಮುದಾಯ ಯಕ್ಷಗಾನದತ್ತ ಹೆಚ್ಚು ಆಕರ್ಷಣೆಗೊಳಗಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಅರ್ಥಧಾರಿಗಳಾಗಿರುವ ಮಹಾಬಲ ಶೆಟ್ಟಿ ಕೂಡ್ಲು ಅವರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ‌‌ ನೀಡಿ ಪುರಸ್ಕರಿಸಲಾಯಿತು. ಹಿರಿಯ ರಂಗ ನಿರ್ದೇಶಕರಾದ ತಮ್ಮ ಲಕ್ಷ್ಮಣ ಅವರಿಗೆ ಬಿ.ರಾಮ ಕಿರೋಡಿಯನ್ ಶತಮಾನ ಸಂಸ್ಮರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದ.ಕ.ಜಿಲ್ಲಾ ಹಾಲು ಉತ್ಪಾದಕರ ಸಂಘದ‌ ಅಧ್ಯಕ್ಷರಾದ ಕೆ.ಪಿ.ಸುಚರೀತ ಶೆಟ್ಟಿ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ನಾಟಕಕಾರರಾದ ಡಾ.ಸಂಜೀವ ದಂಡಕೇರಿ, ಉದ್ಯಮಿ ಕರುಣಾಕರ, ಉದ್ಯಮಿ ಅಶೋಕ್ ಕುಮಾರ್ ಚೌಟ, ಮುಂಬಯಿ ಉದ್ಯಮಿ ಜಗದೀಶ್ ಶೀನ ಪೂಜಾರಿ, ಬಿ.ರಾಮ ಕಿರೋಡಿಯನ್ ಅವರ ಮೊಮ್ಮಗಳಾದ ಸಪ್ನ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷರಾದ ಡಾ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.‌ ತೋನ್ಸೆ ಪುಷ್ಕಲ್ ಕುಮಾರ್ ಅವರು ನಿರೂಪಿಸಿದರು. ಉಪಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಸಮಿತಿ ಪ್ರಮುಖರಾದ ಕರುಣಾ ಕರ ಶೆಟ್ಟಿ ಪಣಿಯೂರು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಆಜ್ರಿ, ನಿವೇದಿತಾ ಎನ್. ಶೆಟ್ಟಿ ಉಪಸ್ಥಿತರಿದ್ದರು.

ಸಪ್ತಾಹದ ಕೊನೆಯಲ್ಲಿ 'ಶ್ರೀಹರಿ ಚರಿತ್ರೆ' ಏಕಾದಶ ಸರಣಿಯ ಏಳನೆಯ ಆಖ್ಯಾನ ' ಕರ್ಣ ಚರಿತ್ರೊ: ಏಕಿನಿ ಕರ್ಣೆ - ದೇವರೆಗ್ ಅರ್ಪಣೆ' ತುಳು ತಾಳಮದ್ದಳೆ ಜರಗಿತು. ಗಣೇಶ್ ಕುಮಾರ್ ಹೆಬ್ರಿ ಮತ್ತು ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಯಲ್ಲಿ ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News