ಪೋಲಿಸರಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ, ನಾಗರಿಕರಿಗೆ ಹಲ್ಲೆ: ಮಣಿಪುರದ ಕುಕಿ ಶಾಸಕರ ಆರೋಪ

Update: 2023-11-03 15:34 GMT

ಸಾಂದರ್ಭಿಕ ಚಿತ್ರ Photo- PTI

ಇಂಫಾಲ: ರಾಜ್ಯದ ಪೋಲಿಸರು ತಮ್ಮ ಸಮುದಾಯಕ್ಕೆ ಸೇರಿದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತ ಜನರ ಮೇಲೆ ಹಲ್ಲೆಗಳನ್ನು ನಡೆಸುತ್ತಿದ್ದಾರೆ ಎಂದು ಮಣಿಪುರದಲ್ಲಿಯ ಎಲ್ಲ ಹತ್ತೂ ಕುಕಿ ಶಾಸಕರು ಆರೋಪಿಸಿದ್ದಾರೆ. ಇವರಲ್ಲಿ ಬಿಜೆಪಿಯ ಎಂಟು ಶಾಸಕರು ಸೇರಿದ್ದಾರೆ ಎಂದು ವರದಿಯಾಗಿದೆ.

ಮೊರೆಹ್ ಪಟ್ಟಣದಲ್ಲಿ ಶಂಕಿತ ಕುಕಿ ಉಗ್ರರಿಂದ ಹಿರಿಯ ಪೋಲಿಸ್ ಅಧಿಕಾರಿ ಚಿಂಗ್ತಮ್ ಆನಂದ ಹತ್ಯೆಯ ಬಳಿಕ ಹಂತಕರನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪೋಲಿಸರು ನಡೆಸುತ್ತಿರುವ ವ್ಯಾಪಕ ಕಾರ್ಯಾಚರಣೆಗಳ ಮಧ್ಯೆಯೇ ಈ ಆರೋಪ ಕೇಳಿಬಂದಿದೆ.

ತಮ್ಮ ಹೇಳಿಕೆಯಲ್ಲಿ ಆನಂದ ಸಾವಿಗೆ ಸಂತಾಪಗಳನ್ನು ಸೂಚಿಸಿರುವ ಈ ಶಾಸಕರು, ಟೆಂಗ್‌ನೌಪಾಲ್ ಜಿಲ್ಲೆಯಲ್ಲಿ ಕುಕಿ-ಝೋಮಿ-ಹಮರ್ ನಾಗರಿಕರ ವಿರುದ್ಧ ಮಣಿಪುರದ ಪೋಲೀಸರ, ವಿಶೇಷವಾಗಿ ಕಮಾಂಡೋಗಳ ವೃತ್ತಿಪರವಲ್ಲದ ನಡವಳಿಕೆ ಮತ್ತು ಅಮಾನವೀಯ ಅತಿರೇಕಗಳನ್ನು ಎತ್ತಿ ತೋರಿಸಲು ಬಯಸಿರುವುದಾಗಿ ಹೇಳಿದ್ದಾರೆ.

ಬುಧವಾರ ಟೆಂಗ್‌ನೌಪಾಲ್‌ನ ಸಿನಾಮ್ ಕುಕಿ ಗ್ರಾಮದಲ್ಲಿ ಕಮಾಂಡೋಗಳು ಅಲ್ಲಿಯ ನಿವಾಸಿಗಳ ಮನೆಗಳು,ಆಸ್ತಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಕಾರ್ಯಾಚರಣೆಗಳು ನಡೆಯುತ್ತಿರುವ ಮೊರೆಹ್‌ನಲ್ಲಿ ಪೋಲಿಸರು ಅಪ್ರಚೋದಿತ ಕ್ರೌರ್ಯವನ್ನು ಮೆರೆಯುತ್ತಿದ್ದು,ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನರು ಸಮೀಪದ ಕಾಡಿಗೆ ಪಲಾಯನ ಮಾಡಿದ್ದಾರೆ. ಕಮಾಂಡೋಗಳಿಂದ ಹಲ್ಲೆ ಮತ್ತು ಲೈಂಗಿಕ ಕಿರುಕುಳಗಳಿಗೆ ತುತ್ತಾದ ಹಲವಾರು ಮಹಿಳೆಯರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಈ ಶಾಸಕರು ಆರೋಪಿಸಿದ್ದಾರೆ.

‘ಅಧಿಕಾರಿಯ ಸಾವಿಗೆ ಕಾರಣರಾದವನ್ನು ಬಂಧಿಸಲು ಪೋಲಿಸರು ಪ್ರಯತ್ನಿಸುತ್ತಿರಬಹುದು,ಆದರೆ ಅವರ ಅನಿಯಂತ್ರಿತ ಕಾನೂನುಬಾಹಿರ ಮತ್ತು ಅನಾಗರಿಕ ಚಟುವಟಿಕೆಗಳನ್ನು ನಾವು ಕ್ಷಮಿಸಲು ಸಾಧ್ಯವಿಲ್ಲ ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News