ತೇಜಸ್ವಿ ಯಾದವ್ ಬೆಂಗಾವಲು ವಾಹನ ಢಿಕ್ಕಿ: ಓರ್ವ ಮೃತ್ಯು

Update: 2024-02-27 06:24 GMT

Photo: indiatoday.in

ಪುರ್ನಿಯಾ (ಬಿಹಾರ): ಆರ್‌ಜೆಡಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಬೆಂಗಾವಲು ವಾಹನವು ಕಾರೊಂದಕ್ಕೆ ಢಿಕ್ಕಿಯಾದ ಪರಿಣಾಮ, ಓರ್ವ ವ್ಯಕ್ತಿ ಮೃತಪಟ್ಟು, ಆರು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.

ಸದ್ಯ ಬಿಹಾರದಲ್ಲಿ ಜನ ವಿಶ್ವಾಸ ಯಾತ್ರೆ ನಡೆಸುತ್ತಿರುವ ತೇಜಸ್ವಿ ಯಾದವ್, ಈ ಯಾತ್ರೆಯ ಭಾಗವಾಗಿ ಪುರ್ನಿಯಾ ಜಿಲ್ಲೆಯ ಮಾರ್ಗವಾಗಿ ಪ್ರಯಾಣಿಸುವಾಗ, ಅವರ ಬೆಂಗಾವಲು ವಾಹನವು ಕಾರೊಂದಕ್ಕೆ ಢಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.

ತೇಜಸ್ವಿ ಯಾದವ್‌ರೊಂದಿಗಿದ್ದ ಬೆಂಗಾವಲು ವಾಹನವು ಅವರನ್ನು ಕಟಿಹಾರ್ ಗಡಿಗೆ ಬಿಟ್ಟು ಬರಲು ತೆರಳುವಾಗ ಪುರ್ನಿಯಾ-ಕಟಿಹಾರ್ ರಸ್ತೆಯ ಮೂಲಕ ವಿರುದ್ಧ ದಿಕ್ಕಿನಲ್ಲಿ ಆಗಮಿಸುತ್ತಿದ್ದ ಕಾರಿಗೆ ಬೆಲೋರಿ ಬಳಿ ರಾತ್ರಿ 11.30 ಗಂಟೆಗೆ ಢಿಕ್ಕಿ ಹೊಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪುರ್ನಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರನಾಥ್ ವರ್ಮ, "ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಮ್ಮ ಬೆಂಗಾವಲು ವಾಹನವೊಂದು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 6 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಅವರಿಗೆ ಜಿಎಂಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News