ಉದ್ಯೋಗಗಳನ್ನು ಕಳೆದುಕೊಳ್ಳಲಿರುವ ಸ್ಪೈಸ್ ಜೆಟ್ ನ 1,400 ಉದ್ಯೋಗಿಗಳು
ಹೊಸದಿಲ್ಲಿ : ಅಗ್ಗದ ದರಗಳಲ್ಲಿ ವಿಮಾನಯಾನ ಸೇವೆಯನ್ನು ಒದಗಿಸುತ್ತಿರುವ ಸ್ಪೈಸ್ ಜೆಟ್ ತನ್ನ ಕಾರ್ಯಾಚರಣೆ ವೆಚ್ಚಗಳನ್ನು ತಗ್ಗಿಸಲು ಉದ್ದೇಶಿಸಿದ್ದು, ತನ್ನ ಕಾರ್ಯಪಡೆಯ ಶೇ.15ರಷ್ಟು ಅಂದರೆ ಸುಮಾರು 1,400 ಉದ್ಯೋಗಿಗಳನ್ನು ವಜಾಗೊಳಿಸಲು ಸಜ್ಜಾಗಿದೆ.
ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸ್ಪೈಸ್ ಜೆಟ್ ಪ್ರಸ್ತುತ ಸುಮಾರು 9,000 ಉದ್ಯೋಗಿಗಳನ್ನು ಹೊಂದಿದ್ದು, ಅಂದಾಜು 30 ವಿಮಾನಗಳು ಕಾರ್ಯಾಚರಣೆಯಲ್ಲಿವೆ.
ಆರ್ಥಿಕ ಬಿಕ್ಕಟ್ಟು, ಮೇಲಿಂದ ಮೇಲೆ ಎದುರಾಗುತ್ತಿರುವ ಕಾನೂನು ತೊಂದರೆಗಳು ಮತ್ತು ಸೇವೆಯಲ್ಲಿರುವ ವಿಮಾನಗಳನ್ನು ಪರಿಗಣಿಸಿ ಹೆಚ್ಚುವರಿ ಸಿಬ್ಬಂದಿಗಳನ್ನು ವಜಾಗೊಳಿಸಲು ಸಂಸ್ಥೆಯು ಯೋಜಿಸಿದೆ. ಈ ವಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಬೆಳವಣಿಗೆಗಳನ್ನು ಬಲ್ಲ ಅಧಿಕಾರಿಯೋರ್ವರು ತಿಳಿಸಿದರು.
ವೆಚ್ಚಗಳನ್ನು ಕಡಿಮೆಗೊಳಿಸಿ ಲಾಭದತ್ತ ಹೊರಳಲು ಮಾನವ ಶಕ್ತಿ ಪರಿಷ್ಕರಣೆ ಸೇರಿದಂತೆ ಹಲವಾರು ಕ್ರಮಗಳನ್ನು ಸಂಸ್ಥೆಯು ಕೈಗೊಳ್ಳುತ್ತಿದೆ. ಇದರಿಂದ ವಾರ್ಷಿಕ 100 ಕೋಟಿ ರೂ.ಗಳ ಉಳಿತಾಯವನ್ನು ನಿರೀಕ್ಷಿಸಲಾಗಿದೆ ಎಂದು ಸ್ಪೈಸ್ ಜೆಟ್ ನ ವಕ್ತಾರರೋರ್ವರು ಹೇಳಿದರು.
ಸ್ಪೈಸ್ ಜೆಟ್ 2019ರಲ್ಲಿ 118 ವಿಮಾನಗಳು ಮತ್ತು 16,000 ಉದ್ಯೋಗಿಗಳನ್ನು ಹೊಂದಿತ್ತು.
ಉದ್ಯೋಗ ಕಡಿತ ವರದಿಗಳ ಹಿನ್ನೆಲೆಯಲ್ಲಿ ಸೋಮವಾರ ಶೇರು ಮಾರುಕಟ್ಟೆಗಳಲ್ಲಿ ಸೈಸ್ ಜೆಟ್ ಶೇರುಗಳು ಶೇ.4.21ರಷ್ಟು ಕುಸಿತವನ್ನು ದಾಖಲಿಸಿವೆ.