ಅಮ್ರಾವತಿ: 152 ದಿನದಲ್ಲಿ 143 ರೈತರ ಆತ್ಮಹತ್ಯೆ
ನಾಗ್ಪುರ: ಹತ್ತಿ ಬೆಳೆಯುವ ಯಾವತ್ಮಲ್ ಜಿಲ್ಲೆ, ಮಹಾರಾಷ್ಟ್ರ ರೈತರ ಆತ್ಮಹತ್ಯೆಯ ರಾಜಧಾನಿ ಎನಿಸಿಕೊಂಡಿತ್ತು. ಆದರೆ ಈ ಬಾರಿ ಪಕ್ಕದ ಅಮ್ರಾವತಿ ಜಿಲ್ಲೆ ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ.
ಯಾವತ್ಮಲ್ ಜಿಲ್ಲೆಯ ಗಡಿಯಲ್ಲಿರುವ ಅಮ್ರಾವತಿ ಹತ್ತಿ ಮತ್ತು ಸೋಯಾಬಿನ್ ಬೆಳೆಯುವ ಪ್ರದೇಶವಾಗಿದ್ದು, ಜಿಲ್ಲೆಯ ಕೆಲ ಭಾಗಗಳಲ್ಲಿ ವಿಖ್ಯಾತ ನಾಗ್ಪುರ ಕಿತ್ತಳೆ ಕೂಡಾ ಬೆಳೆಯಲಾಗುತ್ತದೆ. ಈ ವರ್ಷ ಮೇ ತಿಂಗಳ ವರೆಗೆ 143 ರೈತರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಸರಿಸುಮಾರು ಪ್ರತಿ ದಿನ ಒಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಯಾವತ್ಮಲ್ ಕೂಡಾ 132 ಆತ್ಮಹತ್ಯೆಗಳೊಂದಿಗೆ ತೀರಾ ಹಿಂದಿಲ್ಲ. ಜೂನ್ ತಿಂಗಳ ಅಂಕಿ ಅಂಶಗಳು ಇನ್ನೂ ಲಭ್ಯವಾಗಿಲ್ಲ.
ಅಮ್ರಾವತಿ 2021ರಿಂದೀಚೆಗೆ ಯಾವತ್ಮಲ್ ಜಿಲ್ಲೆಯನ್ನು ಹಿಂದಿಕ್ಕಿದೆ. 2021ರಲ್ಲಿ 370 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, 2022ರಲ್ಲಿ 349, 2023ರಲ್ಲಿ 323 ಮಂದಿ ಜೀವ ಕಳೆದುಕೊಂಡಿದ್ದಾರೆ. ಯಾವತ್ಮಲ್ ಜಿಲ್ಲೆಯಲ್ಲಿ 2021 ರಿಂದ 2023 ಅವಧಿಯಲ್ಲಿ ಕ್ರಮವಾಗಿ 290, 291 ಮತ್ತು 302 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಸಂತರಾವ್ ನಾಯಕ್ ಶೇಟ್ಕರಿ ಸ್ವಾವಲಂಬನ್ ಮಿಷನ್ನ ಮಾಜಿ ಅಧ್ಯಕ್ಷ ಕಿಶೋರ್ ತಿವಾರಿ ಹೇಳುವಂತೆ, ಅಮ್ರಾವತಿಯಲ್ಲಿ ಪರಿಸ್ಥಿತಿ ತೀರಾ ಕಠಿಣವಾಗಿದೆ. ರೈತರು ಸೊಯಾಬಿನ್ ಬೆಳೆಗೆ ವರ್ಗಾವಣೆಯಾಗಿದ್ದಾರೆ. ಫಸಲು ತೀರಾ ಕುಸಿದಿದ್ದು, ಧಾರಣೆ ಕೂಡಾ ಕಳೆದ ವರ್ಷ ಕ್ವಿಂಟಲ್ಗೆ ರೂಪಾಯಿ 4000ಕ್ಕೆ ಕುಸಿದಿದೆ. ಬ್ಯಾಂಕ್ ಸಾಲ ಸಾಕಷ್ಟು ಸಿಗದ ಕಾರಣದಿಂದ ಸಣ್ಣಫೈನಾನ್ಸ್ ಕಂಪನಿಗಳು ಹಾಗೂ ಲೇವಾದೇವಿದಾರರನ್ನು ಅವಲಂಬಿಸಬೇಕಾಗಿದೆ. ಇವರ ವಸೂಲಾತಿ ಕ್ರಮಗಳು ಕಠಿಣವಾಗಿರುವುದು ರೈತರ ಪಾಲಿಗೆ ಮಾರಕವಾಗಿದೆ.
2001ರಿಂದೀಚೆಗೆ ರಾಜ್ಯ ಸಕಾರ ವಿದರ್ಭ, ಅಮ್ರಾವತಿ, ಅಕೋಲಾ, ಯಾವತ್ಮಲ್, ವಾಶಿಂ, ಬುಲ್ಧಾನ ಮತ್ತು ವಾರ್ಧಾ ಜಿಲ್ಲೆಗಳ ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ನಿರ್ವಹಿಸುತ್ತಿದೆ. ಎರಡು ದಶಕಗಳಲ್ಲಿ 22 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.