ನೂಹ್ ಗಲಭೆಗೆ ಸಂಬಂಧಿಸಿ ಇದುವರೆಗೆ 156 ಮಂದಿಯ ಬಂಧನ, 56 ಮಂದಿ ವಿರುದ್ಧ ಎಫ್ಐಆರ್ ದಾಖಲು
ನೂಹ್ (ಹರ್ಯಾಣ): ಹರ್ಯಾಣದ ನೂಹ್ ಜಿಲ್ಲೆಯಲ್ಲಿ ಹಿಂಸಾಚಾರ ಹಾಗೂ ಗಲಭೆಗೆ ಸಂಬಂಧಿಸಿ ಇದುವರೆಗೆ 156ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಹಾಗೂ 56 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ನೂಹ್ ಜಿಲ್ಲೆಯಲ್ಲಿ ನಡೆದ ಈ ಹಿಂಸಾಚಾರದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 88 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ನೂಹ್ ನ ಜಿಲ್ಲಾಧಿಕಾರಿ, ‘‘ಜಿಲ್ಲೆಯಲ್ಲಿ ಇಂದು ಸಂಜೆ 3 ಗಂಟೆ ವರೆಗೆ ಕರ್ಫ್ಯೂ ಸಡಿಲಗೊಳಿಸಿದ ಸಂದರ್ಭ ಬ್ಯಾಂಕ್ ಹಾಗೂ ಎಟಿಎಂಗಳು ತೆರೆದಿದ್ದವು’’ ಎಂದು ತಿಳಿಸಿದ್ದಾರೆ. ಆಗಸ್ಟ್ 6ರಂದು ಕೂಡ ಕರ್ಫ್ಯೂವನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಸಡಿಲಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಈ ನಡುವೆ ಧಾರ್ಮಿಕ ಮೆರವಣಿಗೆಯಲ್ಲಿ ನಡೆದ ಘರ್ಷಣೆ ಸಂದರ್ಭ ಕಲ್ಲು ತೂರಾಟ ನಡೆಸಿದ ನೂಹ್ನ ಕಾನೂನು ಬಾಹಿರ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ವರೆಗೆ ಜಿಲ್ಲೆಯಲ್ಲಿ ಇಂಟರ್ನೆಟ್ಗೆ ನಿಷೇಧ ವಿಧಿಸಲಾಗಿದೆ ಎಂದು ನೂಹ್ನ ಉಪ ಆಯುಕ್ತ ಧಿರೇಂದ್ರ ಖಡ್ಗಾಟ ತಿಳಿಸಿದ್ದಾರೆ.
‘‘ಇಂಟರ್ನೆಟ್ ನಿಷೇಧ ಇಂದು ಕೂಡ ಮುಂದುವರಿದಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಈ ನಿಷೇಧ ಹಿಂಪಡೆಯಲಾಗುವುದು. ಜನ ಸಂಚಾರಕ್ಕೆ ಅನುಕೂಲವಾಗುವಂತೆ ಮಂಗಳವಾರ ಕರ್ಫ್ಯೂವನ್ನು ಹೆಚ್ಚುವರಿ 1 ಗಂಟೆ ಸಡಿಲಿಸಲಾಗಿದೆ’’ ಎಂದು ಖಡ್ಗಾಟ ತಿಳಿಸಿದ್ದಾರೆ.