ನಾವು ನಿರುದ್ಯೋಗಿಗಳು, ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ: ಹಳದಿ ಗ್ಯಾಸ್ ಬಳಸಿ ಪ್ರತಿಭಟನೆ ಮಾಡಿದ ಮಹಿಳೆ ಹೇಳಿಕೆ

Update: 2023-12-13 09:23 GMT

Screengrab:X/@bolebharat11

ಹೊಸದಿಲ್ಲಿ: ಲೋಕಸಭೆಯ ಕಲಾಪದ ವೇಳೆ ಭಾರೀ ಭದ್ರತಾ ವೈಫಲ್ಯ ಉಂಟಾಗಿದ್ದು, ಇಬ್ಬರು ವ್ಯಕ್ತಿಗಳು ಸದನದ ಬಾವಿಯೊಳಗೆ ಇಳಿದು ಸಂಸದರತ್ತ ಹಳದಿ ಗ್ಯಾಸ್ ಸಿಡಿಸಿದ್ದಾರೆ.

ಇನ್ನು, ಸಂಸತ್ತಿನ ಹೊರಗೆ ಆವರಣದಲ್ಲಿ ಕೂಡಾ ಪ್ರತಿಭಟನೆ ನಡೆದಿದೆ. ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಬಳಸಿ ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದೆ.

"ನನ್ನ ಹೆಸರು ನೀಲಂ.. ಭಾರತ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಮತ್ತು ನಮ್ಮ ಹಕ್ಕುಗಳನ್ನು ಕೇಳಿದರೆ ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿ ಚಿತ್ರಹಿಂಸೆ ನೀಡಲಾಗುತ್ತಿದೆ. ನಮಗೆ ಬೇರೆ ಮಾಧ್ಯಮ ಇಲ್ಲ. ನಾವು ವಿದ್ಯಾರ್ಥಿಗಳು. ನಮಗೆ ಉದ್ಯೋಗಗಳಿಲ್ಲ. ನಾವು ಯಾವುದೇ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ. ಸರ್ವಾಧಿಕಾರ ನಿಲ್ಲಿಸಿ..." ಎಂದು ಬಂಧಿತ ನೀಲಂ ಎಂಬಾಕೆ ಹೇಳಿದ್ದಾರೆ.

ಸಂಸತ್ತಿನೊಳಗೆ ಇಬ್ಬರು ಗ್ಯಾಲರಿಯಿಂದ ಸಂಸದರತ್ತ ನುಗ್ಗಿದ್ದು, ಈ ವೇಳೆ ಸಂಸದರು ಲೋಕಸಭೆಯಿಂದ ಹೊರಬಂದಿದ್ದಾರೆ. ಸಭಾಪತಿ ರಾಜೇಂದ್ರ ಅಗರ್ವಾಲ್ ಕಲಾಪವನ್ನು ಮುಂದೂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News