ಉತ್ತರ ಪ್ರದೇಶ | ಪುನರ್ವಸತಿ ಕೇಂದ್ರದಲ್ಲಿ ಇಬ್ಬರು ಮಕ್ಕಳು ಮೃತ್ಯು; ಹಲವರು ಅಸ್ವಸ್ಥ

ಸಾಂದರ್ಭಿಕ ಚಿತ್ರ (PTI)
ಲಕ್ನೊ: ವಿಷಪೂರಿತ ಆಹಾರ ಸೇವನೆಯಿಂದ ಕನಿಷ್ಠ ಇಬ್ಬರು ಮಕ್ಕಳು ಮೃತಪಟ್ಟು, ಹತ್ತಾರು ಮಂದಿ ಅಸ್ವಸ್ಥಗೊಂಡಿರುವ ಘಟನೆ ಲಕ್ನೊದ ಪಾರಾ ಪ್ರದೇಶದಲ್ಲಿರುವ ಸರಕಾರಿ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಅಂದಾಜು 20 ವಿಶೇಷ ಚೇತನ ಮಕ್ಕಳು ಮಂಗಳವಾರ ದಿಢೀರನೆ ಅಸ್ವಸ್ಥಗೊಂಡಿದ್ದು, ಅವರನ್ನೆಲ್ಲ ಲೋಕ ಬಂಧು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಕುರಿತು ಗುರುವಾರ PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಲೋಕ ಬಂಧು ರಾಜ್ ನಾರಾಯಣ್ ಸಂಯುಕ್ತ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೀವ್ ಕುಮಾರ್ ದೀಕ್ಷಿತ್, “ಮಂಗಳವಾರ ಸಂಜೆ ಪುನರ್ವಸತಿ ಕೇಂದ್ರದಿಂದ ಸುಮಾರು 20 ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಯಿತು. ಈ ಎಲ್ಲ ಮಕ್ಕಳೂ ಮನೋವಿಕಲರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆ ತಂದಾಗ, ಅವರೆಲ್ಲ ಗಂಭೀರ ಸ್ವರೂಪದ ನಿರ್ಜಲೀಕರಣಕ್ಕೆ ಒಳಗಾಗಿದ್ದರು. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಇಬ್ಬರು ಮಕ್ಕಳು ಮೃತಪಟ್ಟರು” ಎಂದು ಹೇಳಿದ್ದಾರೆ.
“ಗಂಭೀರವಾಗಿ ಅಸ್ವಸ್ಥಗೊಂಡಿರುವ ಇಬ್ಬರು ಮಕ್ಕಳನ್ನು ಮತ್ತೊಂದು ಸರಕಾರಿ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದ್ದು, ಉಳಿದ 16 ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸತೊಡಗಿದೆ” ಎಂದೂ ಅವರು ತಿಳಿಸಿದ್ದಾರೆ.
ಈ ಘಟನೆಯ ಬೆನ್ನಿಗೇ, ಸ್ಥಳೀಯ ಪ್ರಾಧಿಕಾರಗಳು ಘಟನೆಯ ಕುರಿತು ತನಿಖೆ ಕೈಗೊಂಡಿವೆ.
ಆಹಾರವು ವಿಷಪೂರಿತಗೊಳ್ಳಲು ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಲು ಲಕ್ನೊ ಜಿಲ್ಲಾಧಿಕಾರಿಗಳು ಸಮಿತಿಯೊಂದನ್ನು ರಚಿಸಿದ್ದಾರೆ. ವಿಷಪೂರಿತ ಆಹಾರ ಸೇವನೆಯಿಂದ ತೊಂದರೆಗೀಡಾಗಿರುವ ಮಕ್ಕಳನ್ನು ಸಂದರ್ಶಿಸಲು ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.
“ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ತಲುಪಿದ್ದಾರೆ. ಈ ಅಧಿಕಾರಿಗಳು ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳನ್ನೂ ವಿಚಾರಿಸಿದ್ದಾರೆ” ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿ ತಯಾರಿಸಲಾಗಿದ್ದ ಆಹಾರದ ಮಾದರಿಗಳನ್ನು ವಿಶ್ಲೇಷಣೆಗಾಗಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.
“ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆಯ ತಂಡವೊಂದು ಪುನರ್ವಸತಿ ಕೇಂದ್ರವನ್ನು ತಲುಪಿದ್ದು, ಆಹಾರದ ಮಾದರಿಗಳನ್ನು ಸಂಗ್ರಹಿಸಿದೆ. ತನಿಖಾ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸರಕಾರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪುನರ್ವಸತಿ ಕೇಂದ್ರದಲ್ಲಿ ಒಟ್ಟು 147 ಮಕ್ಕಳು ಆಶ್ರಯ ಪಡೆದಿದ್ದು, ಅವರೆಲ್ಲ ಮೂಲತಃ ಅನಾಥರು ಹಾಗೂ ಮನೋವಿಕಲರೂ ಆಗಿದ್ದಾರೆ ಎಂದು ಜಿಲ್ಲಾ ತರಬೇತಿನಿರತ ಅಧಿಕಾರಿ ವಿಕಾಸ್ ಸಿಂಗ್ ಹೇಳಿದ್ದಾರೆ.