ರಾಜಸ್ಥಾನ| ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಮೃತದೇಹ ನೀರಿನ ಟ್ಯಾಂಕ್ ನಲ್ಲಿ ಪತ್ತೆ
ರಾಜಸ್ಥಾನ: ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಮೃತದೇಹ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆದಿದ್ದು, ನ್ಯಾಯಕ್ಕಾಗಿ ಬಾಲಕರ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಬಾಬರ್ ಮಗ್ರಾ ಪ್ರದೇಶದ ನಿವಾಸಿಗಳಾದ ಆದಿಲ್ (6) ಮತ್ತು ಹಸ್ ನೈನ್ (7) ಮೃತ ಬಾಲಕರು.
ಆದಿಲ್ ಮತ್ತು ಹಸ್ ನೈನ್ ನಾಪತ್ತೆಯಾಗಿರುವ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು. ದೂರನ್ನು ಆಧರಿಸಿ ಹುಡುಕಾಟ ನಡೆಸಿದಾಗ ಇಬ್ಬರು ಮಕ್ಕಳ ಮೃತದೇಹ ಜನರು ವಾಸವಿಲ್ಲದೆ ಖಾಲಿಯಾಗಿದ್ದ ಮನೆಯೊಂದರ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ ಎಂದು ಕೊತ್ವಾಲಿ ಠಾಣೆ SHO ಸವಾಯಿ ಸಿಂಗ್ ತಿಳಿಸಿದ್ದಾರೆ.
ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಕೊಲೆ ಮಾಡಿ ನೀರಿನ ಟ್ಯಾಂಕ್ ಗೆ ಹಾಕಲಾಗಿದೆ ಎಂದು ಬಾಲಕರ ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶವಾಗಾರದ ಹೊರಗೆ ಇಬ್ಬರು ಮಕ್ಕಳ ಫೋಷಕರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಇಬ್ಬರು ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು SHO ಸವಾಯಿ ಸಿಂಗ್ ತಿಳಿಸಿದ್ದಾರೆ.