ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಥಾಣೆಯ ಶಾಲೆಯ ಪ್ರಾಂಶುಪಾಲರ ಸಹಿತ ಮೂವರ ಅಮಾನತು
ಥಾಣೆ: ಇಬ್ಬರು ನರ್ಸರಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಗ:ಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ಎಂಬಲ್ಲಿನ ಶಾಲೆಯ ಆಡಳಿತವೊಂದು ಪ್ರಾಂಶುಪಾಲ ಮತ್ತು ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಪೊಲೀಸರು ಆರೋಪಿಯೆಂದು ಗುರುತಿಸಲಾದ ಶಾಲೆಯ ಸಹಾಯಕನೊಬ್ಬನನ್ನು ಬಂಧಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿ ಮಕ್ಕಳ ಹೆತ್ತವರು ಮಂಗಳವಾರ ಬೆಳಿಗ್ಗೆಯಿಂದ ಸ್ಥಳೀಯ ರೈಲು ನಿಲ್ದಾಣದಲ್ಲಿ ಪ್ರತಿಭಟಿಸುತ್ತಿದ್ದಾರೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗ್ರಹಿಸಿದ್ದಾರೆ.
ನೂರಾರು ಆಕ್ರೋಶಿತ ಹೆತ್ತವರು ಮತ್ತು ಸ್ಥಳೀಯ ನಿವಾಸಿಗಳು ಬದ್ಲಾಪುರ್ ರೈಲು ನಿಲ್ದಾಣದ ಹಳಿಯ ಮೇಲೆ ಇಂದು ಬೆಳಗ್ಗಿನಿಂದ ಪ್ರತಿಭಟಿಸುತ್ತಿದ್ದು ರೈಲುಗಳಿಗೆ ತಡೆಯೊಡ್ಡಿದ್ದಾರೆ. ಈ ಪ್ರತಿಭಟನೆಯಿಂದಾಗಿ ರೈಲು ಸಂಚಾರ ಬಾಧಿತವಾಗಿದೆ.
ಕಿಂಡರ್‌ಗಾರ್ಟನ್ ತರಗತಿಯ ಮೂರು ಮತ್ತು ನಾಲ್ಕು ವರ್ಷ ಪ್ರಾಯದ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಕ್ಕಾಗಿ ಆಗಸ್ಟ್ 17ರಂದು ಪೊಲೀಸರು ಶಾಲೆಯ ಸಹಾಯಕನೊಬ್ಬನನ್ನು ಬಂಧಿಸಿದ್ದರು. ಆತ ಮಕ್ಕಳ ಮೇಲೆ ಶಾಲೆಯ ಶೌಚಾಲಯದಲ್ಲಿ ದೌರ್ಜನ್ಯವೆಸಗಿದ್ದ ಎಂದು ಆರೋಪಿಸಲಾಗಿದೆ. ಆತ ಅನುಚಿತವಾಗಿ ಸ್ಪರ್ಶಿಸಿದ್ದ ಬಗ್ಗೆ ಮಕ್ಕಳು ಹೆತ್ತವರಲ್ಲಿ ದೂರಿದ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಈ ಘಟನೆಯ ನಂತರ ಶಾಲೆಯ ಆಡಳಿತವು ಪ್ರಾಂಶುಪಾಲರು, ಓರ್ವ ಶಿಕ್ಷಕರು ಮತ್ತು ಮಹಿಳಾ ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿತ್ತು. ಆಡಳಿತವು ಘಟನೆ ಕುರಿತಂತೆ ಕ್ಷಮೆಯನ್ನೂ ಯಾಚಿಸಿತ್ತಲ್ಲದೆ ಹೌಸ್‌ಕೀಪಿಂಗ್ ಗುತ್ತಿಗೆ ನೀಡಲಾಗಿದ್ದ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿತ್ತು. ಅಷ್ಟೇ ಅಲ್ಲದೆ ಶಾಲೆಯ ಆವರಣದಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದಿತ್ತು.
ಹೆತ್ತವರು ಪೊಲೀಸರನ್ನು ಸಂಪರ್ಕಿಸಿದಾಗ ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆಂದು ಆರೋಪಿಸಿ ಸ್ಥಳೀಯ ಠಾಣಾಧಿಕಾರಿಯನ್ನೂ ವರ್ಗಾಯಿಸಲಾಗಿತ್ತು.
ಇಂದು ಬೆಳಿಗ್ಗೆ ದೊಡ್ಡ ಸಂಖ್ಯೆಯಲ್ಲಿ ಹೆತ್ತವರು ಮತ್ತು ನಾಗರಿಕರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಆರಂಭಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.