ಸೇನಾಧಿಕಾರಿಯ ಕಿರುಕುಳದಿಂದ ಬೇಸತ್ತು ಉಗ್ರನಾಗಲು ಬಯಸಿದ್ದೆ: ಕಾಶ್ಮೀರ ಶಾಸಕ
ಶ್ರೀನಗರ: ಹದಿಹರೆಯದಲ್ಲಿ ಸೇನಾಧಿಕಾರಿಯೊಬ್ಬರು ನೀಡಿದ್ದ ಕಿರುಕುಳ ಮತ್ತು ಅನುಭವಿಸಿದ ಅವಮಾನದಿಂದ ಬೇಸತ್ತು ಒಂದು ಹಂತದಲ್ಲಿ ಉಗ್ರಗಾಮಿಯಾಗಲು ಬಯಸಿದ್ದೆ; ಆದರೆ ಮೇಲಧಿಕಾರಿಗಳ ಕ್ರಮದಿಂದಾಗಿ ವ್ಯವಸ್ಥೆಯ ಬಗ್ಗೆ ನಂಬಿಕೆ ಪುನಃಸ್ಥಾಪನೆಯಾಯಿತು ಎಂದು ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಖೈಸರ್ ಜಮ್ಶೈದ್ ಲೋನ್ ಶುಕ್ರವಾರ ಬಹಿರಂಗಪಡಿಸಿದರು.
ಹಿರಿಯ ಸೇನಾ ಅಧಿಕಾರಿಯೊಬ್ಬರು ನನ್ನ ಜತೆ ಮಾತನಾಡಿ, ಕಿರಿಯ ಅಧಿಕಾರಿಯ ಕೃತ್ಯವನ್ನು ಖಂಡಿಸಿದರು ಎಂದು ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಬಗೆಗಿನ ಚರ್ಚೆಯ ವೇಳೆ ಲೋನ್ ಈ ವಿಷಯ ಬೆಳಕಿಗೆ ತಂದರು.
ಮಾತುಕತೆಗಳು ಹೇಗೆ ಸಮಸ್ಯೆಯನ್ನು ಇತ್ಯರ್ಥಪಡಿಸಬಲ್ಲವು ಎನ್ನುವುದಕ್ಕೆ ಇದು ನಿದರ್ಶನ ಎಂದು ಲೋಲಬ್ ಕ್ಷೇತ್ರವನ್ನು ಪ್ರತಿನಿಧಿಸುವ ಅವರು ಸ್ಪಷ್ಟಪಡಿಸಿದರು.
"ನಾನು ಯುವಕನಾಗಿದ್ದಾಗ ನಮ್ಮ ಮನೆ ಬಳಿ ಕಾರ್ಯಾಚರಣೆ ನಡೆದಿತ್ತು. ನಾನು ಆಗ 10ನೇ ತರಗತಿ ವಿದ್ಯಾರ್ಥಿಯಾಗಿದ್ದೆ. ನಾನು ಸೇರಿದಂತೆ 32 ಯುವಕರನ್ನು ಪ್ರಶ್ನಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು. ಉಗ್ರ ಸಂಘಟನೆಗೆ ಸೇರಿದ ಒಬ್ಬನ ಬಗ್ಗೆ ವಿವರ ನೀಡುವಂತೆ ಅಧಿಕಾರಿ ಒತ್ತಾಯಿಸಿದರು. "ಆತ ನಮ್ಮ ಪ್ರದೇಶದಲ್ಲಿದ್ದ ಕಾರಣ ಆತನ ಪರಿಚಯ ನನಗಿತ್ತು ಎಂದು ಹೇಳಿದೆ. ನನ್ನನ್ನು ಥಳಿಸಿದರು. ಕಾರ್ಯಾಚರಣೆ ವೇಳೆ ಉಗ್ರರು ಅಲ್ಲಿದ್ದರೇ ಎಂದು ಕೇಳಿದರು. ಆಗ ನಕಾರಾತ್ಮಕವಾಗಿ ಉತ್ತರಿಸಿದೆ. ಮತ್ತೆ ನನ್ನನ್ನು ಹೊಡೆದರು' ಎಂದು ಆಡಳಿತ ಪಕ್ಷದ ಸದಸ್ಯರಾಗಿರುವ ಅವರು ವಿವರಿಸಿದರು.
ಬಳಿಕ ಹಿರಿಯ ಅಧಿಕಾರಿಯೊಬ್ಬರು ಅಗಮಿಸಿ ಮಾತನಾಡಿಸಿದರು. ಜೀವನದ ಮುಂದಿನ ಗುರಿ ಏನೆಂದು ಕೇಳಿದರು. ನಾನು ಉಗ್ರಗಾಮಿಯಾಗಲು ಬಯಸಿದ್ದೇನೆ ಎಂದು ಹೇಳಿದೆ. ಕಾರಣ ಕೇಳಿದಾಗ ಈ ಚಿತ್ರಹಿಂಸೆಯ ಘಟನೆಯನ್ನು ವಿವರಿಸಿದೆ ಎಂದರು.