2027ರ ಮಹಿಳಾ ಫುಟ್ಬಾಲ್ ವಿಶ್ವಕಪ್ ಆತಿಥ್ಯದ ಹಕ್ಕು | ತಾಂತ್ರಿಕ ಮೌಲ್ಯ ಮಾಪನದಲ್ಲಿ ಬ್ರೆಝಿಲ್‌ಗೆ ಹೆಚ್ಚಿನ ಅಂಕ

Update: 2024-05-08 17:47 GMT

PC : X 

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್) : 2027ರ ಮಹಿಳಾ ಫುಟ್ಬಾಲ್ ವಿಶ್ವಕಪ್ ಆತಿಥ್ಯದ ಹಕ್ಕು ಪಡೆಯಲು ಬ್ರೆಝಿಲ್ ಸಲ್ಲಿಸಿರುವ ಬಿಡ್ ಅದರ ಪ್ರತಿಸ್ಪರ್ಧಿ ಬಿಡ್‌ದಾರರಿಗಿಂತ ಹೆಚ್ಚಿನ ಅಂಕಗಳನ್ನು ಪಡೆದಿದೆ ಎಂದು ಫಿಫಾ ಮೌಲ್ಯಮಾಪನ ವರದಿಯೊಂದು ಮಂಗಳವಾರ ತಿಳಿಸಿದೆ.

ಬ್ರೆಝಿಲ್‌ಗೆ ಪ್ರತಿಯಾಗಿ ಬೆಲ್ಜಿಯಮ್, ನೆದರ್‌ಲ್ಯಾಂಡ್ಸ್ ಮತ್ತು ಜರ್ಮನಿ ಜಂಟಿ ಬಿಡ್ ಹಾಕಿವೆ.

ಬ್ಯಾಂಕಾಕ್‌ನಲ್ಲಿ ಮೇ 17ರಂದು ನಡೆಯಲಿರುವ 74ನೇ ಫಿಫಾ ಕಾಂಗ್ರೆಸ್‌ನಲ್ಲಿ ನಡೆಯುವ ಮತದಾನಕ್ಕೆ ಮುನ್ನ ಫಿಫಾದ ಈ ಮೌಲ್ಯಮಾಪನ ವರದಿ ಹೊರಬಿದ್ದಿದೆ. ಮುಂದಿನ ಮಹಿಳಾ ವಿಶ್ವಕಪ್ ಎಲ್ಲಿ ನಡೆಯುತ್ತದೆ ಎನ್ನುವುದನ್ನು ಈ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಕಳೆದ ವಾರ, ಮೆಕ್ಸಿಕೊ ಮತ್ತು ಅಮೆರಿಕ 2027ರ ವಿಶ್ವಕಪ್ ಆತಿಥ್ಯದ ಸ್ಪರ್ಧೆಯಿಂದ ಹಿಂದೆ ಸರಿದಿದ್ದವು. 2031ರ ವಿಶ್ವಕಪ್ ಆತಿಥ್ಯ ವಹಿಸುವ ಪ್ರಯತ್ನಗಳಿಗೆ ಹೆಚ್ಚಿನ ಗಮನ ಹರಿಸುವುದಕ್ಕಾಗಿ ಈ ದೇಶಗಳು ಈ ಕ್ರಮ ತೆಗೆದುಕೊಂಡಿವೆ.

ತಾಂತ್ರಿಕ ಮೌಲ್ಯಮಾಪನದ ಫಲಿತಾಂಶಗಳ ಆಧಾರದಲ್ಲಿ, ಬ್ರೆಝಿಲ್‌ನ ಬಿಡ್‌ಗೆ ಗರಿಷ್ಠ, ಅಂದರೆ ಒಟ್ಟಾರೆ 5ರಲ್ಲಿ 4.0 ಅಂಕಗಳು ಲಭಿಸಿದರೆ, ಬೆಲ್ಜಿಯಮ್, ನೆದರ್‌ಲ್ಯಾಂಡ್ಸ್ ಮತ್ತು ಜರ್ಮನಿ ಒಕ್ಕೂಟಕ್ಕೆ 3.7 ಅಂಕಗಳು ಲಭಿಸಿವೆ.

‘‘ಎರಡೂ ಬಿಡ್‌ಗಳು ಫಿಫಾ ಕೌನ್ಸಿಲ್ ಮತ್ತು ಫಿಫಾ ಕಾಂಗ್ರೆಸ್‌ನ ಪರಿಶೀಲನೆಗೆ ಅರ್ಹವಾಗಿವೆ ಎಂಬ ತೀರ್ಮಾನವನ್ನು ಬಿಡ್ ಮೌಲ್ಯಮಾಪನ ಕಾರ್ಯಪಡೆ ತೆಗೆದುಕೊಂಡಿದೆ. ತಾಂತ್ರಿಕ ಮೌಲ್ಯಮಾಪನದಲ್ಲಿ, 2027ರ ಮಹಿಳಾ ವಿಶ್ವಕಪ್ ಆತಿಥ್ಯ ವಹಿಸಲು ಬೇಕಾದ ಕನಿಷ್ಠ ಅಗತ್ಯಗಳನ್ನು ಎರಡೂ ಬಿಡ್‌ಗಳು ಮೀರಿವೆ’’ ಎಂದು ಫಿಫಾ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News