2019-2021ರ ನಡುವೆ 35,950 ವಿದ್ಯಾರ್ಥಿಗಳು ಆತ್ಮಹತ್ಯೆ: ಕೇಂದ್ರ ಸರ್ಕಾರ

Update: 2023-12-06 07:29 GMT

ಹೊಸದಿಲ್ಲಿ: 2019-2021ರ ನಡುವೆ ಒಟ್ಟು 35,950 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ ಎಂದು hindustantimes.com ವರದಿ ಮಾಡಿದೆ.

ಆದರೆ, ದೇಶದಲ್ಲಿ ಸಾಮಾಜಿಕ ತಾರತಮ್ಯದ ಕಾರಣಕ್ಕೆ ಆತ್ಮಹತ್ಯೆಗೆ ಬಲಿಯಾದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಒಟ್ಟಾರೆ ಸಂಖ್ಯೆಯ ಮಾಹಿತಿಯು ತನ್ನ ಬಳಿ ಇಲ್ಲ ಎಂದು ಎಂದು ಸರ್ಕಾರವು ಹೇಳಿದೆ.

ದೇಶದಲ್ಲಿ ಸಾಮಾಜಿಕ ತಾರತಮ್ಯದ ಕಾರಣಕ್ಕೆ ಆತ್ಮಹತ್ಯೆಗೆ ಬಲಿಯಾಗಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಸಂಖ್ಯೆಯ ಕುರಿತು ಜನತಾದಳ (ಸಂಯುಕ್ತ ) ಪಕ್ಷದ ಸಂಸದರೊಬ್ಬರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, “ದೇಶದಲ್ಲಿ ಸಾಮಾಜಿಕ ತಾರತಮ್ಯದ ಕಾರಣಕ್ಕೆ ಆತ್ಮಹತ್ಯೆಗೆ ಬಲಿಯಾಗಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಸಂಖ್ಯೆಯ ಮಾಹಿತಿ ಸರ್ಕಾರದ ಬಳಿ ಇಲ್ಲ” ಎಂದು ಹೇಳಿದರು.

ಹೀಗಿದ್ದೂ, ರಾಷ್ಟ್ರೀಯ ಅಪರಾಧ ದಾಖಲೆಗಳ ದಳದ ದತ್ತಾಂಶದ ಪ್ರಕಾರ, 2019ರಲ್ಲಿ 10,335, 2020ರಲ್ಲಿ 12,526 ಹಾಗೂ 2021ರಲ್ಲಿ 13,089 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಬಲಿಯಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ದೇಶದಲ್ಲಿ ಸಾಮಾಜಿಕ ತಾರತಮ್ಯವನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಎ.ನಾರಾಯಣಸ್ವಾಮಿ, ಉನ್ನತ ಶಿಕ್ಷಣ ಇಲಾಖೆಯು ಸಮಾಲೋಚನಾ ಘಟಕಗಳು ಹಾಗೂ ದೇಶಾದ್ಯಂತ ಎಸ್‍ಸಿ/ಎಸ್‍ಟಿ ಘಟಕ, ಸಮಾನ ಅವಕಾಶ ಘಟಕ, ವಿದ್ಯಾರ್ಥಿಗಳ ಕುಂದುಕೊರತೆ ಘಟಕಗಳು, ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ಹಾಗೂ ಮಧ್ಯಸ್ಥಿಕೆ ಅಧಿಕಾರಿಗಳು ಸೇರಿದಂತೆ ವಿವಿಧ ಯಂತ್ರಾಂಗಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

‘ಅಸ್ಪೃಶ‍್ಯತೆ’ ಆಚರಣೆಯಿಂದಾಗುವ ಅಂಗವಿಕಲತೆಗೆ ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ 1955 ಸೂಚಿಸಿರುವ ಶಿಕ್ಷೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಮೇಲೆ ಎಸಗುವ ದೌರ್ಜನ್ಯಗಳನ್ನು ತಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ, 1989 ಜಾರಿಯಲ್ಲಿದೆ ಎಂದೂ ಅವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News