ಕುಕಿ ಮಹಿಳೆಯರ ಮೇಲೆ ಇನ್ನೂ 4 ಲೈಂಗಿಕ ದೌರ್ಜನ್ಯ ಪ್ರಕರಣಗಳು: ಮಣಿಪುರದ 10 ಶಾಸಕರ ಆರೋಪ

Update: 2023-07-21 16:53 GMT

Screengrab : Twitter

ಇಂಫಾಲ: ಮಣಿಪುರದ ಕುಕಿ-ರೊ ಸಮುದಾಯದ ಮಹಿಳೆಯರ ಮೇಲಿನ ಅತ್ಯಾಚಾರದ ಇನ್ನೂ ಕನಿಷ್ಠ ನಾಲ್ಕು ಪ್ರಕರಣಗಳು ನಡೆದಿವೆ ಎಂದು ರಾಜ್ಯದ 10 ಶಾಸಕರು ಆರೋಪಿಸಿದ್ದಾರೆ. ಮೂವರು ಕುಕಿ ಮಹಿಳೆಯರ ಮೇಲಿನ ಭಯಾನಕ ಲೈಂಗಿಕ ದೌರ್ಜನ್ಯ ಪ್ರಕರಣ ಬಹಿರಂಗಗೊಂಡ ಎರಡು ದಿನಗಳ ಬಳಿಕ ಈ ಶಾಸಕರು ಹೊಸ ಆರೋಪಗಳನ್ನು ಮಾಡಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಾಲ್ವರು ಮಹಿಳೆಯರ ಪೈಕಿ ಇಬ್ಬರನ್ನು ಕೊಲ್ಲಲಾಗಿದೆ ಎಂದು ಶಾಸಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಓರ್ವ ಮಹಿಳೆಯ ಮೇಲೆ ಎರಡು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದಿದ್ದಾರೆ. ಕನಿಷ್ಠ ಇತರ ನಾಲ್ವರು ಮಹಿಳೆಯರನ್ನು ಕೊಲ್ಲಲಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಈ ಹೇಳಿಕೆಗೆ ಸಹಿ ಹಾಕಿದ ಎಲ್ಲಾ 10 ಶಾಸಕರು ಕುಕು-ರೊ ಸಮುದಾಯಕ್ಕೆ ಸೇರಿದವರು. ಅವರ ಪೈಕಿ ಏಳು ಮಂದಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸದಸ್ಯರು. ಒಬ್ಬರು ಪಕ್ಷೇತರ ಶಾಸಕ ಮತ್ತು ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್ಗೆ ಸೇರಿದವರು. ಈ ಅಲಯನ್ಸ್, ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ನೇತೃತ್ವದ ಆಡಳಿತಾರೂಢ ಮಿತ್ರಕೂಟವನ್ನು ಬೆಂಬಲಿಸುತ್ತದೆ.

‘‘ನಮ್ಮ ಅಸಹಾಯಕ ಮತ್ತು ಅಮಾಯಕ ಕುಕಿ-ರೆ ಜನರ ಮೇಲೆ ಮೇತೈ ಉಗ್ರರು ನಡೆಸಿರುವ ಕ್ರೌರ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಕೃತ್ಯಗಳು ನಮ್ಮ ಸಹ ಭಾರತೀಯರ ಅಂತಃಸಾಕ್ಷಿಯನ್ನು ಕದಡಿವೆ’’ ಎಂದು ಹೇಳಿಕೆ ತಿಳಿಸಿದೆ.

ಈ ಅತ್ಯಾಚಾರ ಪ್ರಕರಣಗಳ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಬೇಕು ಮತ್ತು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News