ಕೇವಲ 4 ರಾಜ್ಯಗಳಲ್ಲಿ 10 ಲಕ್ಷ ಎಕರೆಗಳಷ್ಟು ಹಿಂದೂ ದತ್ತಿ ಭೂಮಿ ಇದೆ: ಅಸದುದ್ದೀನ್ ಉವೈಸಿ

Update: 2024-10-02 11:53 GMT

ಅಸದುದ್ದೀನ್ ಉವೈಸಿ (PTI)

ಹೊಸದಿಲ್ಲಿ: 10 ಲಕ್ಷ ಎಕರೆಗಳಷ್ಟು ಹಿಂದೂ ದತ್ತಿ ಭೂಮಿ ಭಾರತದ ಬರೀ ನಾಲ್ಕು ರಾಜ್ಯಗಳಲ್ಲಿದೆ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ವಕ್ಫ್ ಮಂಡಳಿಗಳು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ಭೂಮಿಯನ್ನು ಹೊಂದಿದೆ. ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಯ ನಂತರ ವಕ್ಫ್ ಬೋರ್ಡ್ ಭಾರತದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿದೆ ಎಂಬ ಹೇಳಿಕೆಗಳ ಬಗ್ಗೆ ಉವೈಸಿ ಸಿಎಜಿ ವರದಿ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಉವೈಸಿ, ತಮಿಳುನಾಡಿನಲ್ಲಿ ದೇವಸ್ಥಾನ ಮತ್ತು ಮಠಗಳ ಅಧೀನದಲ್ಲಿ 4.78 ಲಕ್ಷ ಎಕರೆ ಜಮೀನಿದೆ. ಆಂಧ್ರಪ್ರದೇಶದಲ್ಲಿ ಹಿಂದೂ ದತ್ತಿ ಭೂಮಿ 4 ಲಕ್ಷ ಎಕರೆಗಳಷ್ಟಿದೆ. ತೆಲಂಗಾಣದಲ್ಲಿ 87,000 ಎಕರೆ ಭೂಮಿ ಹಿಂದೂ ದತ್ತಿ ಇಲಾಖೆಗೆ ಸೇರಿದೆ. ಒಡಿಶಾದಲ್ಲಿ 13 ದೇವಾಲಯಗಳು 12,776 ಎಕರೆ ಜಮೀನನ್ನು ಹೊಂದಿದೆ ಎಂದು ಸಿಎಜಿ(CAG) ವರದಿಯು ಹೇಳುತ್ತದೆ. ಈ ನಾಲ್ಕು ರಾಜ್ಯಗಳಲ್ಲಿ ಹಿಂದೂ ದತ್ತಿ ಇಲಾಖೆ 10 ಲಕ್ಷ ಎಕರೆಯಷ್ಟು ಜಮೀನನ್ನು ಹೊಂದಿದೆ. ನಾನು ಇದರಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಬಂಗಾಳ, ಅಸ್ಸಾಂ ಮತ್ತು ಜಾರ್ಖಂಡ್ ರಾಜ್ಯಗಳ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹೊಂದಿರುವ ಭೂಮಿಯನ್ನು ಉಲ್ಲೇಖಿಸಿಲ್ಲ ಎಂದು ಉವೈಸಿ ಹೇಳಿದ್ದಾರೆ.

ಪ್ರತ್ಯೇಕ ದರ್ಗಾ ಮಂಡಳಿ ರಚನೆಗೆ ಆಗ್ರಹಿಸಿದವರ ಬಗ್ಗೆ ವಾಗ್ಧಾಳಿ ನಡೆಸಿದ ಉವೈಸಿ, ವೇಷ ಬದಲಿಸಿಕೊಂಡು ಜೋಕರ್ಗಳು ಡ್ರಾಮದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ್ದಾರೆ. ವಕ್ಫ್ ಬಿಲ್ ಅನ್ನು ಬೆಂಬಲಿಸಿದ ಓರ್ವರು ಖ್ವಾಜಾ ಗರೀಬ್ ನವಾಜ್ ಅವರ ಉತ್ತರಾಧಿಕಾರಿ ಎಂಬ ಹೇಳಿಕೆಯನ್ನು ಅವರು ತಳ್ಳಿಹಾಕಿದ್ದು, ಅವರು ಖ್ವಾಜಾ ಗರೀಬ್ ನವಾಜ್ ಅವರ ಉತ್ತರಾಧಿಕಾರಿಯಲ್ಲ, ಮೋದಿಯವರ ಉತ್ತರಾಧಿಕಾರಿ ಎಂದು ಹೇಳಿದ್ದಾರೆ.

ಈ ಜನರು ದರ್ಗಾದಿಂದ ವಾರ್ಷಿಕವಾಗಿ 5% ಹೆಚ್ಚಳದೊಂದಿಗೆ 2 ಕೋಟಿ ರೂ. ಪಡೆಯುತ್ತಾರೆ. ಈ 2 ಕೋಟಿಯಲ್ಲಿ ಬಡವರು, ವಿಧವೆಯರು ಮತ್ತು ಅನಾಥರಿಗೆ ಎಷ್ಟು ಕೆಲಸ ಮಾಡಿದ್ದೀರಿ? ಎಂದು ವಕ್ಫ್ ತಿದ್ದುಪಡಿ ಮಸೂದೆಗೆ ಅವರ ಬೆಂಬಲಿಸಿದವರನ್ನು ಉವೈಸಿ ಪ್ರಶ್ನಿಸಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲಿಸುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಇದು ಸೂಫಿಸಂ ಎಂದು ನೀವು ಹೇಳಿದರೆ, ನಿಮ್ಮ ಆಚಾರಗಳು ಮತ್ತು ಆಚರಣೆಗಳು ವಿಭಿನ್ನವಾಗಿದ್ದರೆ, ಅವು ಶರಿಯಾಕ್ಕೆ ಅನುಗುಣವಾಗಿವೆಯೇ ಅಥವಾ ಇಲ್ಲವೇ ಎಂದು ಹೇಳಿ? ಶರಿಯಾ ಪ್ರಕಾರವೇ ಇದ್ದಲ್ಲಿ, ಹೊಸ ಕಾನೂನು ಅಗತ್ಯವಿಲ್ಲ, ಪ್ರಸ್ತುತ ಕಾನೂನು ಸಾಕು ಎಂದು ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಹರ್ಯಾಣದಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದಿರುವ ುವೈಸಿ, ಮೋದಿಯ ಆಡಳಿತ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸುವಂತೆ ಆಗ್ರಹಿಸಿದ ಉವೈಸಿ, ಮಸೂದೆಯು ವಕ್ಫ್ ಪರಿಕಲ್ಪನೆಯನ್ನು ನಾಶಮಾಡಲು ಪ್ರಯತ್ನಿಸುತ್ತದೆ. ಪ್ರತಿಭಟಿಸುವ ಸಮಯ ಬಂದಾಗ, ನೀವು ನಮ್ಮೊಂದಿಗೆ ನಿಲ್ಲುತ್ತೀರಾ ಅಥವಾ ಡಿಜೆ ಟ್ಯೂನ್ಗಳಿಗೆ ನೃತ್ಯ ಮಾಡುತ್ತೀರಾ? ಅಥವಾ ನೀವು ಅಲ್ಲಾಹನ ಮಸೀದಿ, ಔಲಿಯಾಗಳ ದರ್ಗಾಗಳು, ನಿಮ್ಮ ಪೂರ್ವಜರ ಧಪನ ಭೂಮಿಗಳನ್ನು ರಕ್ಷಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News