7 ವರ್ಷಗಳ ತನಿಖೆಯ ನಂತರ NDTV ಮಾಜಿ ಪ್ರವರ್ತಕರ ವಿರುದ್ಧ ಮುಕ್ತಾಯ ವರದಿ ಸಲ್ಲಿಸಿದ ಸಿಬಿಐ
ಹೊಸದಿಲ್ಲಿ: ವಂಚನೆ ಆರೋಪಕ್ಕೆ ಗುರಿಯಾಗಿದ್ದ NDTV ಪ್ರವರ್ತಕರು ಹಾಗೂ ನಿರ್ದೇಶಕರಾದ ಪ್ರಣವ್ ರಾಯ್ ಮತ್ತು ರಾಧಿಕಾ ರಾಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಬಿಐ ಮುಕ್ತಾಯ ವರದಿ ಸಲ್ಲಿಸಿದೆ. 2009ರಲ್ಲಿ ಐಸಿಐಸಿಐ ಬ್ಯಾಂಕ್ ನಿಂದ ಪಡೆದಿದ್ದ ಸಾಲದ ಮರುಪಾವತಿಯಲ್ಲಿ ಬ್ಯಾಂಕ್ ಗೆ ರೂ. 48 ಕೋಟಿ ನಷ್ಟವುಂಟಾಗಿದೆ ಎಂಬ ಆರೋಪವನ್ನು ಸಮರ್ಥಿಸುವಂತೆ ಕಾನೂನಾತ್ಮಕ ಸಾಕ್ಷ್ಯಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾರ್ವಜನಿಕ ಮುಕ್ತ ಹರಾಜಿನಲ್ಲಿ NDTVಯ ಶೇ. 20ರಷ್ಟು ಷೇರನ್ನು ಖರೀದಿಸಲು ಇಂಡಿಯಾ ಬುಲ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ರಾಯ್ ಗಳೊಂದಿಗೆ ಸಂಬಂಧ ಹೊಂದಿರುವ ಆರ್ಆರ್ಪಿಆರ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ರೂ. 500 ಕೋಟಿ ಸಾಲ ಪಡೆದಿತ್ತು ಎಂದು ಕ್ವಾಂಟಂ ಸೆಕ್ಯುರಿಟೀಸ್ ಲಿಮಿಟೆಡ್ ನ ಸಂಜಯ್ ದತ್ ಎಂಬವರು ನೀಡಿದ್ದ ದೂರನ್ನು ಆಧರಿಸಿ 2017ರಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿತ್ತು.
ಎಫ್ಐಆರ್ ಪ್ರಕಾರ, ಇಂಡಿಯಾ ಬುಲ್ಸ್ ಸಾಲವನ್ನು ಮರುಪಾವತಿ ಮಾಡಲು ಐಸಿಐಸಿಐ ಬ್ಯಾಂಕ್ ನಿಂದ ಆರ್ಆರ್ಪಿಆರ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ರೂ. 375 ಕೋಟಿ (ವಿತರಿಸಲಾದ ಮೊತ್ತ ರೂ. 350 ಕೋಟಿ) ಸಾಲ ಪಡೆದಿತ್ತು ಎಂದು ಹೇಳಲಾಗಿದೆ.
ಈ ಸಾಲಕ್ಕೆ ಪ್ರತಿಯಾಗಿ, ಸೆಬಿ ಅಥವಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮಾಹಿತಿ ನೀಡದೆ ರಾಯ್ ಗಳು ತಮ್ಮ ಸಂಪೂರ್ಣ ಷೇರುಗಳನ್ನು ಸಾಲಕ್ಕೆ ಪ್ರತಿಯಾಗಿ ಅಡಮಾನ ಇರಿಸಿದ್ದರು ಎಂದು ದೂರುದಾರರು ಆರೋಪಿಸಿದ್ದರು.
ಏಳು ವರ್ಷಗಳ ತನಿಖೆಯ ನಂತರ, ವಿಶೇಷ ನ್ಯಾಯಾಲಯದೆದುರು ಸಿಬಿಐ ಮುಕ್ತಾಯ ವರದಿಯನ್ನು ಸಲ್ಲಿಸಿದೆ. ವಿಶೇಷ ನ್ಯಾಯಾಲಯವು ಈ ವರದಿಯನ್ನು ಅಂಗೀಕರಿಸಬೇಕೊ ಅಥವಾ ಸಿಬಿಐಗೆ ತನಿಖೆ ಮುಂದುವರಿಸುವಂತೆ ಸೂಚಿಸಬೇಕೊ ಎಂಬುದನ್ನು ನಿರ್ಧರಿಸಲಿದೆ.
2022ರಲ್ಲಿ, ರಾಯ್ ಗಳ ಷೇರನ್ನು ಅದಾನಿ ಸಮೂಹ ಖರೀದಿಸುವ ಮೂಲಕ NDTVಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.