ಗುಜರಾತ್ | ಆಸ್ಪತ್ರೆಗೆ ತೆರಳಲು ಸೂಕ್ತ ರಸ್ತೆಯಿಲ್ಲದೆ, ಮಾರ್ಗಮಧ್ಯದಲ್ಲೇ ನವಜಾತ ಶಿಶುಗೆ ಜನ್ಮ ನೀಡಿ ಮೃತಪಟ್ಟ ಆದಿವಾಸಿ ಮಹಿಳೆ
ವಡೋದರ: ಆಸ್ಪತ್ರೆಗೆ ತೆರಳಲು ಸೂಕ್ತ ರಸ್ತೆಯಿಲ್ಲದೆ, ಮಾರ್ಗಮಧ್ಯದಲ್ಲೇ ನವಜಾತ ಶಿಶುಗೆ ಜನ್ಮ ನೀಡಿ, ಆದಿವಾಸಿ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಛೋಟಾ ಉದೇಪುರ್ ಜಿಲ್ಲೆಯ ಕವಂತ್ ತಾಲ್ಲೂಕಿನ ಆದಿವಾಸಿ ಗ್ರಾಮವಾದ ತುರ್ಖೇಡಾದಲ್ಲಿರುವ ಬಸ್ಕರಿಯ ಫಾಲಿಯಾದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಕವಿತಾ ಎಂದು ಗುರುತಿಸಲಾಗಿದೆ.
ಮಂಗಳವಾರ ಮುಂಜಾನೆ ಸುಮಾರು 5 ಗಂಟೆಗೆ ಕಿಶನ್ ಭಿಲ್ ಎಂಬುವವರ ಪತ್ನಿ ಕವಿತಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ನೆರೆಹೊರೆಯವರೆಲ್ಲ ಆಕೆಯನ್ನು ಬಟ್ಟೆಯ ಸ್ಟ್ರೆಚರ್ ನಲ್ಲಿ 108 ಆ್ಯಂಬುಲೆನ್ಸ್ ಸಂಪರ್ಕವಿರುವ 5 ಕಿಮೀ ದೂರದ ಪಿಕಪ್ ಪಾಯಿಂಟ್ ಬಳಿಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಅಲ್ಲಿಂದ 25 ಕಿಮೀ ದೂರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕೆಯನ್ನು ನಂತರ ಕರೆದೊಯ್ಯಬೇಕಿತ್ತು.
ಆದರೆ, ಒಂದು ಕಿಮೀ ಕ್ರಮಿಸುವ ವೇಳೆಗಾಗಲೇ ಮಾರ್ಗಮಧ್ಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಕವಿತಾ, ಕೊನೆಯುಸಿರೆಳೆದಿದ್ದಾರೆ. ನಂತರ ಅದೇ ಬಟ್ಟೆಯ ಸ್ಟ್ರೆಚರ್ ನಲ್ಲಿ ಕವಿತಾ ಅವರ ಮೃತದೇಹವನ್ನು ಮನೆಗೆ ಮರಳಿ ತಂದಿರುವ ನೆರೆಹೊರೆಯವರು, ಆಕೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಕಡಿದಾದ ಬೆಟ್ಟಗುಡ್ಡಗಳ ನಡುವಿರುವ ಬಸ್ಕರಿಯ ಫಾಲಿಯಾ ಗ್ರಾಮಕ್ಕೆ ಈವರೆಗೆ ಒಂದು ರಸ್ತೆ ನಿರ್ಮಾಣವಾಗಿಲ್ಲ. ಏನೇ ಆರೋಗ್ಯ ಸಮಸ್ಯೆ ಬಂದರೂ, ಇಲ್ಲಿಂದ 25 ಕಿಮೀ ದೂರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಲು ಸುಮಾರು ಐದು ಕಿಮೀ ನಡೆದೇ ಹೋಗಬೇಕು. ಅಲ್ಲಿಂದ 108 ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.
“ಹಲವಾರು ವರ್ಷಗಳಿಂದ ನಮ್ಮ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಿ, ಆ್ಯಂಬುಲೆನ್ಸ್ ಪ್ರವೇಶಿಸಲು ಅವಕಾಶ ಮಾಡಿಕೊಡಿ ಎಂದು ಸರಕಾರವನ್ನು ಮನವಿ ಮಾಡುತ್ತಲೇ ಬರುತ್ತಿದ್ದೇವೆ” ಎಂದು ಕವಿತಾಳ ದುಃಖತಪ್ತ ಪತಿ ಕಿಶನ್ ಭಿಲ್ ಅಳಲು ತೋಡಿಕೊಂಡರು.
ಗರ್ಭಿಣಿಯರು ಇದೇ ಪ್ರಥಮ ಬಾರಿಗೆ ಸಾವನ್ನಪ್ಪುತ್ತಿರುವುದಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕವಿತಾಗೂ ಮುನ್ನ ಇನ್ನೂ ಮೂವರು ಇದೇ ರೀತಿಯಲ್ಲಿ ಸಾವನ್ನಪ್ಪಿದ್ದರು ಎನ್ನುತ್ತಾರೆ ಅವರು.
ಈ ಕುರಿತು ಸ್ಥಳೀಯ ಬಿಜೆಪಿ ಸಂಸದ ಜಶು ರಾಥ್ವಾರನ್ನು ಸಂಪರ್ಕಿಸಿದಾಗ, ರಾಜ್ಯದ ಎಲ್ಲೆಡೆ ತಮ್ಮ ಪಕ್ಷದ ನೇತೃತ್ವದ ಸರಕಾರವು ಡಾಂಬರು ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಿದ್ದರೂ, ಕಡಿದಾದ ಬೆಟ್ಟ ಪ್ರದೇಶವಿರುವುದರಿಂದ ತುರ್ಖೇಡಾದಲ್ಲಿ ಡಾಂಬರು ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.