‘ಭಾರತ್ ಜೋಡೋ ಯಾತ್ರೆ' ಕುರಿತು ದೇವೇಂದ್ರ ಫಡ್ನವಿಸ್ ವಿವಾದಾತ್ಮಕ ಹೇಳಿಕೆ | 40 ಸಂಘಟನೆಗಳನ್ನು ಹೆಸರಿಸುವಂತೆ ಯೋಗೇಂದ್ರ ಯಾದವ್ ಸವಾಲು
ಲಾತೂರ್ : ಭಾರತ್ ಜೋಡೊ ಯಾತ್ರೆಯ ಮುಂಚೂಣಿಯಲ್ಲಿ ಭಾಗವಹಿಸಿದ್ದವು ಎಂದು ಆರೋಪಿಸಲಾಗಿರುವ 40 ನಕ್ಸಲ್ ಸಂಘಟನೆಗಳನ್ನು ಹೆಸರಿಸುವಂತೆ ಶನಿವಾರ ಹೋರಾಟಗಾರ ಯೋಗೇಂದ್ರ ಯಾದವ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸವಾಲು ಎಸೆದಿದ್ದಾರೆ.
ಎರಡು ದಿನಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 180 ನಕ್ಸಲ್ ಸಂಘಟನೆಗಳ ಪೈಕಿ 40 ಸಂಘಟನೆಗಳು ಭಾರತ್ ಜೋಡೊ ಯಾತ್ರೆಯ ಮುಂಚೂಣಿಯಲ್ಲಿ ಭಾಗವಹಿಸಿದ್ದವು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಯೋಗೇಂದ್ರ ಯಾದವ್ ಮೇಲಿನಂತೆ ಆಗ್ರಹಿಸಿದ್ದಾರೆ.
ಅಲ್ಲದೆ, ನವೆಂಬರ್ 15ರಂದು ಕಠ್ಮಂಡುವಿನಲ್ಲಿ ನಡೆದಿದ್ದ ಸಭೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲ ಸಂಘಟನೆಗಳು ಭಾಗವಹಿಸಿದ್ದವು ಹಾಗೂ ಆ ಸಭೆಯಲ್ಲಿ ಇವಿಎಂಗೆ ವಿರೋಧ ವ್ಯಕ್ತಪಡಿಸುವುದು ಹಾಗೂ ಮತಪತ್ರವನ್ನು ಪರಿಚಯಿಸುವ ಕುರಿತು ಚರ್ಚಿಸಲಾಗಿತ್ತು ಎಂದೂ ದೇವೇಂದ್ರ ಫಡ್ನವಿಸ್ ಆರೋಪಿಸಿದ್ದರು.
ಮಹಾರಾಷ್ಟ್ರದ ಲಾತೂರ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತ್ ಜೋಡೊ ಅಭಿಯಾನದ ರಾಷ್ಟ್ರೀಯ ಸಂಚಾಲಕರೂ ಆದ ಯೋಗೇಂದ್ರ ಯಾದವ್, “ಮಹಾತ್ಮ ಗಾಂಧಿಯವರ ಅನುಯಾಯಿಗಳಾದ ನಮಗೆ ನಕ್ಸಲರು ಎಂದು ಹಣೆಪಟ್ಟಿ ಕಟ್ಟಲು ಹೇಗೆ ಸಾಧ್ಯ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಗೇಂದ್ರ ಯಾದವ್, 40 ನಕ್ಸಲ್ ಸಂಘಟನೆಗಳ ಹೆಸರನ್ನು ಬಹಿರಂಗಪಡಿಸಿ ಎಂದು ಫಡ್ನವಿಸ್ ಗೆ ಸವಾಲು ಎಸೆದರಲ್ಲದೆ, ಯಾವ ಸಂಘಟನೆಯ ಹೆಸರಿನಲ್ಲಿ ನೇಪಾಳದಲ್ಲಿ ಸಭೆ ನಡೆಸಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿ ಎಂದೂ ಆಗ್ರಹಿಸಿದರು.