ಮಿಝೋರಾಂನಲ್ಲಿ ಮ್ಯಾನ್ಮಾರ್ ನ 40,000 ಕುಕಿಗಳು ವಾಸಿಸುತ್ತಿದ್ದರೂ ಯಾವುದೇ ಸಮಸ್ಯೆ ಸೃಷ್ಟಿಸಿಲ್ಲ: ಅಮಿತ್ ಶಾ ಗೆ ತಿರುಗೇಟು ನೀಡಿದ ಸಂಸದ
ಹೊಸ ದಿಲ್ಲಿ: ಮಣಿಪುರದಲ್ಲಿನ ಜನಾಂಗೀಯ ಸಂಘರ್ಷದಲ್ಲಿ ಮ್ಯಾನ್ಮಾರ್ ನಿಂದ ಬಂದಿರುವ ಕುಕಿಗಳ ಕೊಡುಗೆಯಿದೆ ಎಂದು ಕಳೆದ ವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಿರುಗೇಟು ನೀಡಿರುವ ಮಿಝೋರಾಂ ರಾಜ್ಯದ ರಾಜ್ಯಸಭಾ ಸದಸ್ಯ ಕೆ.ವನ್ಲಲ್ವೇನಾ, ನೆರೆಯ ದೇಶದ 40,000 ನಿರಾಶ್ರಿತರಿಗೆ 2021ರಿಂದ ಮಿಝೋರಾಂ ರಾಜ್ಯವು ಆಶ್ರಯ ನೀಡಿದ್ದರೂ, ಅವರ್ಯಾರೂ ಈವರೆಗೆ ಯಾವುದೇ ಸಮಸ್ಯೆ ಸೃಷ್ಟಿಸಿಲ್ಲ ಎಂದು ಅವರು ಹೇಳಿದ್ದಾಗಿ thehindu.com ವರದಿ ಮಾಡಿದೆ.
ವನ್ಲಲ್ವೇನಾರ ಎಂಎನ್ಎಫ್ ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎ ಅಂಗಪಕ್ಷವಾಗಿದೆ.
ರಾಜ್ಯಸಭೆಯಲ್ಲಿ ಮಿಝೋ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಏಕೈಕ ಪ್ರತಿನಿಧಿ ನಾನಾಗಿದ್ದರೂ, ನನಗೆ ಮಣಿಪುರ ಹಿಂಸಾಚಾರದ ಕುರಿತು ಮಾತನಾಡಲು ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು The Hindu ಪತ್ರಿಕೆಗೆ ಪ್ರತಿಕ್ರಿಯಿಸಿರುವ ವನ್ಲಲ್ವೇನಾ, “ಜುಲೈ 20ರಂದು ಮಳೆಗಾಲದ ಸಂಸತ್ ಅಧಿವೇಶನ ಪ್ರಾರಂಭವಾದಾಗಿನಿಂದ ನಾನು ಮಣಿಪುರ ವಿಷಯದ ಕುರಿತು ಚರ್ಚಿಸಲು ಪ್ರಾರಂಭದ ದಿನದಿಂದಲೇ ಪ್ರತಿದಿನ ನೋಟಿಸ್ ನೀಡುತ್ತಿದ್ದೇನೆ. ಆದರೆ, ಅದನ್ನು ಸಭಾಧ್ಯಕ್ಷರು ಅಂಗೀಕರಿಸುತ್ತಿಲ್ಲ. ಲೋಕಸಭೆಯಲ್ಲಿ ಕುಕಿ ಸಮುದಾಯವನ್ನು ಅಮಿತ್ ಶಾ ದೂಷಿಸಿದ ಮರುದಿನ, ಆಗಸ್ಟ್ 11ರಂದು ನಾನು ಆ ಕುರಿತು ಮಾತನಾಡಲು ಬಯಸಿದ್ದೆ. ಆದರೆ, ನನ್ನ ಮೈಕ್ರೊಫೋನ್ ಅನ್ನು ಸ್ವಿಚ್ಡ್ ಆಫ್ ಮಾಡಲಾಯಿತು ಹಾಗೂ ನಾನು ನನ್ನ ವಿಚಾರವನ್ನು ಮಂಡಿಸಲು ಅವಕಾಶ ನಿರಾಕರಿಸಲಾಯಿತು” ಎಂದು ತಿಳಿಸಿದ್ದಾರೆ.
2021ರಲ್ಲಿ ಮ್ಯಾನ್ಮಾರ್ ನಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ನಂತರ ದಾಖಲೆಯಿಲ್ಲದ ಹಲವಾರು ನಿರಾಶ್ರಿತರು ಭಾರತಕ್ಕೆ ವಲಸೆ ಬಂದಿದ್ದಾರೆ. ಸುಮಾರು 40,000 ಮಂದಿ ನಿರಾಶ್ರಿತರು ಮಿಝೋರಾಂನಲ್ಲಿ ಆಶ್ರಯ ಪಡೆದಿದ್ದು, ಸುಮಾರು 40,000 ಮಂದಿ ನಿರಾಶ್ರಿತರು ಮಣಿಪುರ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ. ಈ ವಲಸಿಗರು ಕುಕಿ-ಚಿನ್-ಝೋ ಜನಾಂಗೀಯ ಗುಂಪಿಗೆ ಸೇರಿದವರಾಗಿದ್ದು, ಮಿಝೋರಾಂ ಹಾಗೂ ಮಣಿಪುರದಲ್ಲಿನ ಕುಕಿ ಸಮುದಾಯದೊಂದಿಗೆ ಜನಾಂಗೀಯ ಸಂಬಂಧ ಹಂಚಿಕೊಂಡಿದ್ದಾರೆ.