ಇವಿಎಮ್ ಸಂಗ್ರಹಾಗಾರದಲ್ಲಿ 45 ನಿಮಿಷ ಸಿಸಿಟಿವಿ ಬಂದ್, ಪಿತೂರಿ ಶಂಕೆ ; ಬಾರಾಮತಿ ಅಭ್ಯರ್ಥಿ ಸುಪ್ರಿಯಾ ಸುಳೆ ಆರೋಪ

Update: 2024-05-13 15:48 GMT

ಸುಪ್ರಿಯಾ ಸುಳೆ | PC :NDTV 

ಮುಂಬೈ: ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿನ ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಮ್)ಗಳ ಸುರಕ್ಷತೆ ಬಗ್ಗೆ ಎನ್ ಸಿ ಪಿ (ಎಸ್ಪಿ) ಪಕ್ಷದ ನಾಯಕಿ ಸುಪ್ರಿಯಾ ಸುಳೆ ಸೋಮವಾರ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿರುವ ಅವರು, ಮತದಾನದ ಬಳಿಕ ಇವಿಎಮ್ಗಳನ್ನು ಇಡಲಾಗಿರುವ ಗೋದಾಮಿನ ಸುರಕ್ಷತಾ ಕ್ಯಾಮರಗಳನ್ನು ಸೋಮವಾರ ಮುಂಜಾನೆ 45 ನಿಮಿಷಗಳ ಕಾಲ ಬಂದ್ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿ ಪಿ)ದ ಎರಡು ಬಣಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಶರದ್ ಪವಾರ್ ನೇತೃತ್ವದ ಬಣದಿಂದ ಅವರ ಮಗಳು ಸುಪ್ರಿಯಾ ಸುಳೆ ಸ್ಪರ್ಧಿಸಿದರೆ, ಶರದ್ ಪವಾರ್ ರ ಸಹೋದರನ ಮಗ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣದಿಂದ ಅವರ ಪತ್ನಿ ಸುನೇತ್ರಾ ಪವಾರ್ ಸ್ಪರ್ಧಿಸುತ್ತಿದ್ದಾರೆ.

ಬಾರಾಮತಿ ಲೋಕಸಭಾ ಕ್ಷೇತ್ರದ ಇಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಪುಣೆ ಜಿಲ್ಲೆಯ ಗೋದಾಮು ಒಂದರಲ್ಲಿ ಸಂಗ್ರಹಿಸಿಡಲಾಗಿದೆ. ಈ ಗೋದಾಮಿನ ಸಿಸಿಟಿವಿ ಕ್ಯಾಮರಗಳು 45 ನಿಮಿಷ ಬಂದ್ ಆಗಿದ್ದು, ಪಿತೂರಿ ನಡೆದಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಬಣ ಆರೋಪಿಸಿದೆ.

ಇದು ಅತ್ಯಂತ ಸಂಶಯಾಸ್ಪದ ಘಟನೆಯಾಗಿದೆ ಎಂದು ಆರೋಪಿಸಿರುವ ಸುಳೆ, ಇದು ಚುನಾವಣಾ ಆಯೋಗದ ಕಡೆಯಿಂದ ನಡೆದ ಘೋರ ಲೋಪವಾಗಿದೆ ಎಂದು ಬಣ್ಣಿಸಿದ್ದಾರೆ.

‘‘ಬಾರಾಮತಿ ಲೋಕಸಭಾ ಕ್ಷೇತ್ರದದಲ್ಲಿ ಮತದಾನ ನಡೆದ ಬಳಿಕ, ಇವಿಎಮ್ ಗಳನ್ನು ಇಡಲಾಗಿರುವ ಗೋದಾಮಿನ ಸಿಸಿಟಿವಿಯನ್ನು ಇಂದು ಬೆಳಗ್ಗೆ 45 ನಿಮಿಷಗಳ ಕಾಲ ಬಂದ್ ಮಾಡಲಾಗಿದೆ. ಇದು ದೊಡ್ಡ ಲೋಪವಾಗಿದೆ’’ ಎಂದು ಸುಳೆ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಚುನಾವಣಾ ಪ್ರತಿನಿಧಿಗಳು ಸಂಬಂಧಿತ ಅಧಿಕಾರಿಗಳು ಮತ್ತು ಆಡಳಿತವನ್ನು ಸಂಪರ್ಕಿಸಿದಾಗ, ತೃಪ್ತಿಕರ ಉತ್ತರ ಸಿಗಲಿಲ್ಲ. ಅದೂ ಅಲ್ಲದೆ, ಸ್ಥಳದಲ್ಲಿರುವ ಟೆಕ್ನೀಶಿಯನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ’’ ಎಂದು ಅವರು ಹೇಳಿದ್ದಾರೆ.

ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿರುವ ಮತ ಯಂತ್ರಗಳ ಸ್ಥಿತಿಗತಿಯನ್ನು ಪರಿಶೀಲಿಸಲು ನನ್ನ ಚುನಾವಣಾ ಪ್ರತಿನಿಧಿಗಳಿಗೆ ಅಧಿಕಾರಿಗಳು ಅವಕಾಶ ನೀಡುತಿಲ್ಲ ಎಂಬುದಾಗಿಯೂ ಅವರು ಆರೋಪಿಸಿದರು.

‘‘ಚುನಾವಣಾ ಆಯೋಗವು ತಕ್ಷಣ ಇದನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಸಿಸಿಟಿವಿಯನ್ನು ಬಂದ್ ಮಾಡಿರುವುದಕ್ಕೆ ಕಾರಣಗಳನ್ನು ಬಹಿರಂಗಪಡಿಸಬೇಕು. ಜೊತೆಗೆ, ಈ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’’ ಎಂದು ಸುಪ್ರಿಯಾ ಸುಳೆ ಹೇಳಿದರು.

ಸಿಸಿಟಿವಿ ಕೇಬಲ್ ತಪ್ಪಿಸಿದ್ದು ಗೋದಾಮಿನ ಇಲೆಕ್ಟ್ರೀಶಿಯನ್ ; ಚುನಾವಣಾಧಿಕಾರಿಯಿಂದ ಸ್ಪಷ್ಟೀಕರಣ

ಮತ ಯಂತ್ರಗಳನ್ನು ಸಂಗ್ರಹಿಸಿಡಲಾಗಿರುವ ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿ ಸೋಮವಾರ ಬೆಳಗ್ಗೆ 10:30 ಮತ್ತು 11:15ರ ನಡುವೆ ಸಿಸಿಟಿವಿಗಳನ್ನು ಬಂದ್ ಮಾಡಲಾಗಿತ್ತು ಎಂದು ಸುಪ್ರಿಯಾ ಸುಳೆಯ ಚುನಾವಣಾ ಪ್ರತಿನಿಧಿ ಲಕ್ಷ್ಮಿಕಾಂತ್ ಖಬಿಯ ಆರೋಪಿಸಿದ್ದಾರೆ.

‘‘ಸಿಸಿಟಿವಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇವಿಎಮ್ಗಳ ಮೇಲೆ ನಿಗಾ ಇಡಲು ನಮ್ಮ ಪಕ್ಷದಿಂದ ಪ್ರತಿನಿಧಿಗಳನ್ನು ನಿಯೋಜಿಸಲಾಗಿತ್ತು. ಸಿಸಿಟಿವಿಗಳನ್ನು ಸುಮಾರು 45 ನಿಮಿಷಗಳ ಕಾಲ ಬಂದ್ ಮಾಡಲಾಗಿದೆ ಎಂಬ ಎಚ್ಚರಿಕೆ ನಮಗೆ ಸೋಮವಾರ ಬಂತು. ನಾವು ಪೊಲೀಸರ ಗಮನಕ್ಕೆ ಇದನ್ನು ತರಲು ಪ್ರಯತ್ನಿಸಿದೆವು. ಆಡಳಿತವು ಸ್ಪಷ್ಟೀಕರಣವೊಂದನ್ನು ನೀಡಿದೆ. ಆದರೆ ನಾವು ಬಾರಾಮತಿಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

ಆದರೆ, ಸೋಮವಾರ ಗೋದಾಮು ಆವರಣದಲ್ಲಿ ಇಲೆಕ್ಟ್ರಿಕಲ್ ಕೆಲಸವೊಂದನ್ನು ಮಾಡುವುದಕ್ಕಾಗಿ ಸ್ವಲ್ಪ ಸಮಯ ಸಿಸಿಟಿವಿ ಕ್ಯಾಮರಗಳ ಕೇಬಲನ್ನು ತೆಗೆಯಬೇಕಾಯಿತು ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟೀಕರಣವೊಂದನ್ನು ನೀಡಿದ್ದಾರೆ.

ಎನ್ ಸಿ ಪಿ (ಎಸ್ಪಿ)ಯ ದೂರನ್ನು ಪರಿಶೀಲಿಸಲಾಗಿದೆ ಹಾಗೂ ಗೋದಾಮಿನ ಇಲೆಕ್ಟ್ರೀಶಿಯನ್ ಒಬ್ಬರು ಕೇಬಲವನ್ನು ತೆಗೆದಿರುವುದು ಪತ್ತೆಯಾಗಿದೆ. ಇದರಿಂದಾಗಿ ಪ್ರದರ್ಶನ ಪರದೆಯು ಬಂದ್ ಆಗಿತ್ತು ಎಂದು ಬಾರಾಮತಿ ಚುನಾವಣಾಧಿಕಾರಿ ಕವಿತಾ ದ್ವಿವೇದಿ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News