ರಾಜಸ್ಥಾನ | ಬೋರ್ ವೆಲ್ ಗೆ ಬಿದ್ದ 5 ವರ್ಷದ ಬಾಲಕ ಮೃತ್ಯು

Screengrab:X/PTI_News
ಕೋಟಾ: ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಬೋರ್‌ವೆಲ್‌ಗೆ ಬಿದ್ದು 32 ಅಡಿ ಆಳದಲ್ಲಿ ಸಿಲುಕಿದ್ದ ಐದರ ಹರೆಯದ ಬಾಲಕನನ್ನು ಸತತ 16 ಗಂಟೆಗಳ ಕಾರ್ಯಾಚರಣೆ ಬಳಿಕ ಬೋರ್ ವೆಲ್ ನಿಂದ ಮೇಲಕ್ಕೆತ್ತಲಾಗಿದೆ, ಆದರೆ ದುರದೃಷ್ಟವಶಾತ್ ಬಾಲಕ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಟಾದ ಪರಾಲಿಯ ಗ್ರಾಮದ ನಿವಾಸಿ ಪ್ರಹ್ಲಾದ್ ಅವರ ಪುತ್ರ ಕಲುಲಾಲ್ ಬಗರಿಯಾ ಎಂಬ ಬಾಲಕ ಪೋಷಕರು ಜೊತೆ ಹೊಲಕ್ಕೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಬೋರ್‌ವೆಲ್‌ಗೆ ಬಿದ್ದಿದ್ದಾನೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಮೃತದೇಹವನ್ನು ಬೋರ್ ವೆಲ್ ನಿಂದ ಮೇಲಕ್ಕೆತ್ತಿದೆ. ಸ್ಥಳದಲ್ಲಿದ್ದ ವೈದ್ಯಕೀಯ ತಂಡ ಪರಿಶೀಲನೆ ನಡೆಸಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದೆ ಎಂದು ಎಸ್‌ಡಿಎಂ ಛತರ್‌ಪಾಲ್ ಚೌಧರಿ ತಿಳಿಸಿದ್ದಾರೆ.
ಈ ಕುರಿತು ಡಿಎಸ್ಪಿ ಜೈಪ್ರಕಾಶ್ ಅಟಲ್ ಪ್ರತಿಕ್ರಿಯಿಸಿ, ರವಿವಾರ ಬಾಲಕ ಆಕಸ್ಮಿಕವಾಗಿ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಘಟನೆ ನಡೆದ ಒಂದು ಗಂಟೆಯೊಳಗಡೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಬಾಲಕನಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗಿದೆ. ಆದರೆ ಬಾಲಕ ಬದುಕುಳಿದಿಲ್ಲ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಬಾಲಕನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.