ಎಲ್ವಿಶ್ ಯಾದವ್ ವಿರುದ್ಧ ಹಣ ದುರುಪಯೋಗ ಪ್ರಕರಣ ದಾಖಲು

Update: 2024-05-04 11:28 GMT

ಎಲ್ವಿಶ್ ಯಾದವ್ | PC : NDTV 

ಹೊಸದಿಲ್ಲಿ: ಯುಟ್ಯೂಬರ್ ಮತ್ತು ಬಿಗ್‍ಬಾಸ್ ಓಟಿಟಿ 2 ವಿಜೇತ ಎಲ್ವಿಶ್ ಯಾದವ್ ಮತ್ತು ಇತರರ ವಿರುದ್ಧ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸ್ನೇಕ್ ವೆಮನ್- ರೇವ್ ಪಾರ್ಟಿ ಪ್ರಕರಣದಲ್ಲಿ ಹಣ ದುರುಪಯೋಗ ಪ್ರಕರಣ ದಾಖಲಿಸಿದ್ದಾರೆ.

2023ರ ನವೆಂಬರ್ 3ರಂದು ನೋಯ್ಡಾದಲ್ಲಿ ನಡೆದ ಪಾರ್ಟಿ ಹಿನ್ನೆಲೆಯಲ್ಲಿ ಪಿಎಂಎಲ್‍ಎ ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧದಿಂದ ಬಂದ ಸಂಪತ್ತನ್ನು ಅಪರಾಧ ಮತ್ತು ರೇವ್ ಪಾರ್ಟಿ ಆಯೋಜಿಸಲು ಬಳಸುತ್ತಿದ್ದರು ಎಂದು ಆಪಾದಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದವ್ ಮತ್ತು ಇತರರನ್ನು ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.

ಈತನೇ ಆಯೋಜಿಸಿದ್ದ ಶಂಕಿತ ರೇವ್ ಪಾರ್ಟಿಗೆ ಹಾವಿನ ವಿಷವನ್ನು ಪೂರೈಸುತ್ತಿದ್ದ ಆಧಾರದಲ್ಲಿ ಮಾರ್ಚ್ 18ರಂದು ಈತನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದರು. 26 ವರ್ಷ ವಯಸ್ಸಿನ ಈತನನ್ನು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆದಾಗ್ಯೂ ಬಂಧನದ ಐದು ದಿನಗಳಲ್ಲಿ ಆತ ನೋಯ್ಡಾ ಕೋರ್ಟ್‍ನಿಂದ ಜಾಮೀನು ಪಡೆದಿದ್ದ. ಪ್ರಕರಣದ ಇತರ ಐದು ಮಂದಿ ಆರೋಪಿಗಳನ್ನು ನವೆಂಬರ್‍ನಲ್ಲಿ ಬಂಧಿಸಲಾಗಿದ್ದು, ಇವರಿಗೆ ಸ್ಥಳೀಯ ಕೋರ್ಟ್ ಜಾಮೀನು ನೀಡಿತ್ತು. ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. 20 ಮಿಲಿ ಲೀಟರ್ ಹಾವಿನ ವಿಷ ಕೂಡಾ ವಶಪಡಿಸಿಕೊಳ್ಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News