ಆಯುಷ್ಮಾನ್ ಭಾರತ್ ಯೋಜನೆಯನ್ನು ನಂಬಿ ಬಂದವರಿಂದ ಕೋಟಿಗಟ್ಟಲೆ ದೋಚಿದ ಕೇಂದ್ರ ಸರಕಾರದ ಪ್ರಮುಖ ಆಸ್ಪತ್ರೆಯ ವೈದ್ಯ; ವರದಿ

Update: 2023-07-21 14:00 GMT

ಹೊಸದಿಲ್ಲಿ: ಕೇಂದ್ರ ಸರಕಾರವು ನಡೆಸುತ್ತಿರುವ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ದಿಲ್ಲಿಯ ಸಫ್ದರಜಂಗ್ ಆಸ್ಪತ್ರೆಯ ನ್ಯೂರೊ ಸರ್ಜರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಮನೀಶ ರಾವತ್ ನ್ಯಾಯಾಂಗ ಬಂಧನದಲ್ಲಿದ್ದು, ಸಿಬಿಐನಿಂದ ತನಿಖೆಗೊಳಟ್ಟಿದ್ದಾರೆ. ರಾವತ್ ತನ್ನ ಸಹಚರರೊಂದಿಗೆ ಸೇರಿಕೊಂಡು ಕೇಂದ್ರದ ಮಹತ್ವಾಕಾಂಕ್ಷೆಯ ಆಯುಷ್ಮಾನ ಭಾರತ ಯೋಜನೆಯನ್ನು ನಂಬಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳನ್ನು ಯೋಜನೆಯ ಸೌಲಭ್ಯಗಳಿಂದ ವಂಚಿಸಿ ಕೋಟಿಗಟ್ಟಲೆ ದುಡ್ಡು ಮಾಡಿದ ಆರೋಪ ಎದುರಿಸುತ್ತಿದ್ದಾರೆ ಎಂದು The Indian Express ವರದಿ ಮಾಡಿದೆ.

ಈ ವರ್ಷದ ಮಾರ್ಚ್ ನಲ್ಲಿ ಮೀರತ್ನ ಸಲಾಹ್ಪುರ ಗ್ರಾಮದ ಲೈನ್ಮನ್ ಕಾರ್ಯನಿರತರಾಗಿದ್ದಾಗ ವಿದ್ಯುತ್ ಕಂಬದಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗಾಗಿ ಆಯುಷ್ಮಾನ ಭಾರತ ಯೋಜನೆಯನ್ನು ಹೊಂದಿದ್ದ ಕುಟುಂಬದವರು ಚಿಕಿತ್ಸೆಯ ವೆಚ್ಚಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಚಿಕಿತ್ಸೆ ಪೂರ್ಣಗೊಂಡಾಗ ಡಾ.ರಾವತ್ ನೇತೃತ್ವದ ಮಾಫಿಯಾ ಅವರಿಂದ 80,000 ರೂ.ಗಳನ್ನು ಸುಲಿದಿತ್ತು.

ಕಳೆದ ಮೂರು ತಿಂಗಳುಗಳಲ್ಲಿ 54 ರೋಗಿಗಳನ್ನು ಹೀಗೆ ವಂಚಿಸಿರುವುದು ಅಧಿಕೃತ ದಾಖಲೆಗಳು, ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಕೆಗಳ ತನಿಖೆಯಿಂದ ಬಹಿರಂಗಗೊಂಡಿದೆ. ಕೋವಿಡ್ ಸಂದರ್ಭ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಈ ಮಾಫಿಯಾ ಹೆಚ್ಚಾಗಿ ಬಡ ಕುಟುಂಬಗಳಿಂದ ಇಂಪ್ಲಾಂಟ್ ಗಳಿಗಾಗಿ 2.7 ಕೋ.ರೂ.ಗಳನ್ನು ಸುಲಿದಿದೆ. ಹಣವನ್ನು ಕಬಳಿಸಲು ಮಧ್ಯವರ್ತಿಗಳು ಮತ್ತು ಕಂಪನಿಗಳನ್ನು ಬಳಸಿಕೊಳ್ಳಲಾಗಿದ್ದು, ಇವುಗಳಲ್ಲಿ ಮೂರು ಕಂಪನಿಗಳಲ್ಲಿ ರಾವತ್ ಪತ್ನಿ ಪಾಲುದಾರರಾಗಿದ್ದಾರೆ.

ವಿಪರ್ಯಾಸವೆಂದರೆ ಇಂತಹ ಹೆಚ್ಚಿನ ಇಂಪ್ಲಾಂಟ್ ಗಳು ಅಥವಾ ಕಸಿಗಳು ಆಯುಷ್ಮಾನ್ ಭಾರತ ಯೋಜನೆಯ ವ್ಯಾಪ್ತಿಯಲ್ಲಿ ಒಳಗೊಂಡಿವೆ. ಅಂದರೆ ಅವುಗಳಿಗಾಗಿ ರೋಗಿಗಳು ಒಂದು ಪೈಸೆಯನ್ನೂ ಪಾವತಿಸಬೇಕಿಲ್ಲ. ಆದರೆ ಡಾ.ರಾವತ್ ಇತರರೊಂದಿಗೆ ಸೇರಿಕೊಂಡು ಅಕ್ರಮವಾಗಿ ಹಣ ಸಂಪಾದನೆಗಾಗಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹ ರೋಗಿಗಳಿಗೆ ಅವಕಾಶ ನೀಡಿರಲಿಲ್ಲ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಸಫ್ದರಜಂಗ್ ಆಸ್ಪತ್ರೆಯೊಂದಿಗೆ ಗುರುತಿಸಿಕೊಂಡಿರುವ ಕೆಲವು ವ್ಯಕ್ತಿಗಳು ತನ್ನ ಕಕ್ಷಿದಾರರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ. ವೈದ್ಯರು ಮೆಡಿಕಲ್ ಇಂಪ್ಲಾಂಟ್  ಗಳನ್ನು ಖರೀದಿಸಲು ತಮ್ಮ ರೋಗಿಗಳಿಗೆ ಮಾರಾಟಗಾರರನ್ನು ಶಿಫಾರಸು ಮಾಡುವುದು ಸಾಮಾನ್ಯವಾಗಿದೆ. ರಾವತ್ ಪ್ರಕರಣದಲ್ಲಿ ಅವರು ಶಿಫಾರಸು ಮಾಡಿದ್ದ ಮಾರಾಟಗಾರರು ಗರಿಷ್ಠ ಮಾರಾಟ ಬೆಲೆಗಿಂತ ಕಡಿಮೆ ಬೆಲೆಗಳಲ್ಲಿ ಇಂಪ್ಲಾಂಟ್ ಗಳನ್ನು ರೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಡಾ.ರಾವತ್ ಪರ ವಕೀಲ ನವೀನ ಕುಮಾರ ಸಮಜಾಯಿಷಿ ನೀಡಿದರು.

ಆಯುಷ್ಮಾನ್ ಭಾರತ ಯೊಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿರುವ 27,000ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಶೇ.57ರಷ್ಟು ಸರಕಾರಿ ಆಸ್ಪತ್ರೆಗಳಾಗಿವೆ. ಇದು ಬಡರೋಗಿಗಳು ತಮಗೆ ಮೋಸವಾಗುವುದಿಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ಚಿಕಿತ್ಸೆ ಪಡೆಯುವುದನ್ನು ಸಾಧ್ಯವಾಗಿಸಿದೆ. ಆದರೆ ಡಾ.ರಾವತ್ ಪ್ರಕರಣವು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬೆಟ್ಟು ಮಾಡಿದೆ.

ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ 94 ರೋಗಿಗಳು ಮಾಡಿರುವ ಪಾವತಿಗಳನ್ನು ಪರಿಶೀಲಿಸಿದ್ದು, ಅಧಿಕ ಶುಲ್ಕವನ್ನು ಪಾವತಿಸಿರುವ 54 ರೋಗಿಗಳ ದತ್ತಾಂಶಗಳನ್ನು ಸಂಗ್ರಹಿಸಿದೆ.

ದತ್ತಾಂಶಗಳ ವಿಶ್ಲೇಷಣೆಯು ಇಂಪ್ಲಾಟ್ಗಳ ನಿಜವಾದ ಬೆಲೆ ಹಾಗೂ ಡಾ.ರಾವತ್ ಮತ್ತು ಕಂಪನಿ ರೋಗಿಗಳಿಂದ ವಸೂಲು ಮಾಡಿರುವ ಬೆಲೆಗಳಲ್ಲಿನ ಭಾರೀ ವ್ಯತ್ಯಾಸಗಳನ್ನು ಬಹಿರಂಗಗೊಳಿಸಿದೆ. 25 ಪ್ರಕರಣಗಳಲ್ಲಿ ಇಂಪ್ಲಾಂಟ್ ಗಳಿಗೆ ಅವುಗಳ ನಿಜವಾದ ಬೆಲೆಗಿಂತ ಶೇ.500ರಷ್ಟು ಅಧಿಕ ಶುಲ್ಕವನ್ನು ವಿಧಿಸಲಾಗಿದೆ!

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News