ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಪ್ ಶಾಸಕ ಅಮಾನತುಲ್ಲಾ ಖಾನ್ ರನ್ನು ಬಂಧಿಸಿದ ಈಡಿ
ನವದೆಹಲಿ: ವಕ್ಫ್ ಬೋರ್ಡ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳ ತಂಡ ಆಮ್ ಆದ್ಮಿ ಪಕ್ಷದ(ಆಪ್) ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿದೆ.
ಅಮಾನತುಲ್ಲಾ ಖಾನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈಡಿ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅಮಾನತುಲ್ಲಾ ಖಾನ್ ಈ ಮೊದಲು ಬರೆದುಕೊಂಡಿದ್ದು, ನನ್ನನ್ನು ಬಂಧಿಸಲು ʼಈಡಿʼ ಅಧಿಕಾರಿಗಳು ನನ್ನ ಮನೆಗೆ ಬಂದಿದ್ದಾರೆ ಎಂದು ಹೇಳಿಕೊಂಡಿದ್ದರು.
ದಿಲ್ಲಿಯ ಓಖ್ಲಾದಲ್ಲಿ ಖಾನ್ ಅವರ ಮನೆಯ ಹೊರಗೆ ದಿಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿತ್ತು. ಈ ಕುರಿತ ವಿಡಿಯೋದಲ್ಲಿ ಖಾನ್ ಅವರ ನಿವಾಸಕ್ಕೆ ಹೋಗುವ ರಸ್ತೆಗಳಲ್ಲಿ ಭಾರೀ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಿರುವುದು ಮತ್ತು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿರುವುದು ಕಂಡು ಬಂದಿತ್ತು.
ಅಮಾನತುಲ್ಲಾ ಖಾನ್ ಅವರ ನಿವಾಸದ ಮೇಲಿನ ದಾಳಿಯನ್ನು ಆಪ್ ನಾಯಕರು ಖಂಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಆಪ್ ಸಂಸದ ಸಂಜಯ್ ಸಿಂಗ್, ಬಿಜೆಪಿಯ ರಾಜಕೀಯ ದ್ವೇಷದ ಭಾಗವಾಗಿ ಖಾನ್ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
2018 ಮತ್ತು 2022ರ ನಡುವೆ ವಕ್ಫ್ ಬೋರ್ಡ್ ಗೆ ಅಕ್ರಮವಾಗಿ ಸಿಬ್ಬಂದಿಗಳನ್ನು ನೇಮಿಸಿದ್ದಾರೆ ಮತ್ತು ವಕ್ಫ್ ಬೋರ್ಡ್ ಆಸ್ತಿಗಳನ್ನು ಅಕ್ರಮವಾಗಿ ಗುತ್ತಿಗೆ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆಯನ್ನು ನಡೆಸುತ್ತಿದೆ.