ಆಪ್ ಸಂಸದ ರಾಘವ್ ಚಡ್ಡಾ, ಅನಿರ್ಧಿಷ್ಟ ಅಮಾನತು ಕಳವಳಕಾರಿ: ಸುಪ್ರೀಂ ಕೋರ್ಟ್

Update: 2023-10-30 14:06 GMT

ರಾಘವ್ ಚಡ್ಡಾ | Photo: PTI

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಆಪ್)ದ ಸಂಸದ ರಾಘವ್ ಚಡ್ಡಾರನ್ನು ರಾಜ್ಯಸಭೆಯಿಂದ ಅನಿರ್ಧಿಷ್ಟಾವಧಿಗೆ ಅಮಾನತುಗೊಳಿಸಿರುವುದು ಗಂಭೀರ ಕಳವಳದ ಸಂಗತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ರಾಘವ್ ಚಡ್ಢಾರನ್ನು ಆ.11ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಸದನದ ನಾಯಕ ಪೀಯೂಶ್ ಗೋಯಲ್ ಮಂಡಿಸಿದ ನಿರ್ಣಯವನ್ನು ಮೇಲ್ಮನೆಯು ಧ್ವನಿಮತದಿಂದ ಅಂಗೀಕರಿಸಿತ್ತು. ತಮ್ಮ ಅನುಮತಿಯಿಲ್ಲದೆ ಸದನ ಸಮಿತಿಯೊಂದರಲ್ಲಿ ತಮ್ಮನ್ನು ಸೇರ್ಪಡೆಗೊಳಿಸಲು ಚಡ್ಡಾ ಉದ್ದೇಶಿಸಿದ್ದರು ಎಂಬುದಾಗಿ ಐವರು ಸಂಸದರು ಆರೋಪಿಸಿದ ಬಳಿಕ ಈ ನಿರ್ಣಯವನ್ನು ಮಂಡಿಸಲಾಗಿತ್ತು.

ತನ್ನ ಅಮಾನತನ್ನು ರಾಘವ್ ಚಡ್ಡಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅಮಾನತುಗೊಳಿಸುವ ಅಧಿಕಾರವನ್ನು ಗುರಾಣಿಯಾಗಿ ಬಳಸಿಕೊಳ್ಳಬೇಕೇ ಹೊರತು ಖಡ್ಗದಂತೆ ಅಲ್ಲ ಎಂದು ಅವರು ವಾದಿಸಿದ್ದರು.

ಸೋಮವಾರ, ಚಡ್ಡಾ ಎದುರಿಸುತ್ತಿರುವುದು, ಈ ಐವರು ಸಂಸದರನ್ನು ಸಮಿತಿಯಲ್ಲಿ ಸೇರಿಸಬೇಕೆಂದು ಪ್ರಸ್ತಾಪ ಸಲ್ಲಿಸುವ ಮೊದಲು ಅವರ ಅನುಮತಿಯನ್ನು ಕೇಳಲಿಲ್ಲ ಎಂಬ ಆರೋಪವನ್ನು ಮಾತ್ರ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು. ಇದು ಅವರನ್ನು ಅನಿರ್ಧಿಷ್ಟ ಅಮಾನತಿಗೆ ಒಳಪಡಿಸುವಷ್ಟು ದೊಡ್ಡ ಆರೋಪವೇ? ಎಂದು ನ್ಯಾಯಾಲಯ ಪ್ರಶ್ನಿಸಿತು.

‘‘ಪ್ರತಿಪಕ್ಷ ಸದಸ್ಯನನ್ನು ಸದನದಿಂದ ಹೊರಗಿಟ್ಟಿರುವುದು ಗಂಭೀರ ವಿಷಯವಾಗಿದೆ. ಅವರು ಆಡಳಿತ ಪಕ್ಷ ಪ್ರತಿನಿಧಿಸುವ ಧ್ವನಿಗಿಂತ ಭಿನ್ನ ಧ್ವನಿಯನ್ನು ಪ್ರತಿನಿಧಿಸುವವರಾಗಿದ್ದಾರೆ. ಇದು ಸಾಂವಿಧಾನಿಕ ನ್ಯಾಯಾಲಯದ ಗಂಭೀರ ಕಳವಳವಾಗಿದೆ. ಅನಿರ್ಧಿಷ್ಟ ಅಮಾನತು ಕಳವಳಕ್ಕೆ ಕಾರಣವಾಗಿದೆ ಮತ್ತು ಈಗಾಗಲೇ 75 ದಿನಗಳ ಕಳೆದಿವೆ’’ ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರ ಮುಂದುವರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News