ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಆಪ್ ನ ಸಂಜಯ್ ಸಿಂಗ್ ಗೆ ಅನುಮತಿ ನಿರಾಕರಣೆ
ಹೊಸದಿಲ್ಲಿ: ರಾಜ್ಯ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು ಅನುಮತಿ ನಿರಾಕರಿಸಿರುವುದರಿಂದ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರು ಸೋಮವಾರ ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ.
ಈ ಪ್ರಕರಣ ಪ್ರಸಕ್ತ ಹಕ್ಕುಚ್ಯುತಿ ಸಮಿತಿಯ ಮುಂದಿದೆ ಎಂದು ಜಗದೀಪ್ ಧನಕರ್ ಅವರು ಹೇಳಿದ್ದಾರೆ.
ಸಭಾಧ್ಯಕ್ಷರ ನಿರ್ದೇಶನವನ್ನು ಅನುಸರಿಸದ ಹಿನ್ನೆಲೆಯಲ್ಲಿ ಕಳೆದ ವರ್ಷ ಜುಲೈ 24ರಂದು ರಾಜ್ಯ ಸಭೆಯಿಂದ ಅಮಾನತುಗೊಂಡಿರುವ ಸಂಜಯ್ ಸಿಂಗ್ ರಾಜ್ಯ ಸಭೆಯ ಇನ್ನೊಂದು ಅವಧಿಗೆ ಆಪ್ ನಿಂದ ಜನವರಿಯಲ್ಲಿ ಮರು ನಾಮ ನಿರ್ದೇಶನಗೊಂಡಿದ್ದರು. ಸಂಜಯ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಅಕ್ಟೋಬರ್ 4 ರಂದು ಬಂಧಿಸಿತ್ತು.
ಇದಕ್ಕಿಂತ ಮೊದಲು ರೋಸ್ ಅವೆನ್ಯೂ ನ್ಯಾಯಾಲಯ ಶನಿವಾರ ಸಂಜಯ್ ಸಿಂಗ್ ರಾಜ್ಯ ಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನೀಡಿತ್ತು. ನ್ಯಾಯಾಲಯ ಸಂಜಯ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ಕೂಡ ಫೆಬ್ರವರಿ 17ರ ವರೆಗೆ ವಿಸ್ತರಿಸಿತ್ತು.
ಈ ಹಿಂದೆ ಚುನಾವಣಾ ನಾಮಪತ್ರ ಸಲ್ಲಿಸಲು ಹಾಗೂ ಚುನಾವಣಾಧಿಕಾರಿಯಿಂದ ಸದಸ್ಯತ್ವದ ಪ್ರಮಾಣ ಪತ್ರ ಸ್ವೀಕರಿಸಲು ಸಂಜಯ್ ಸಿಂಗ್ಗೆ ಅನುಮತಿ ನೀಡಲಾಗಿತ್ತು.
ನ್ಯಾಯಾಲಯ ಡಿಸೆಂಬರ್ 22ರಂದು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.