ದಿಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ: ಅತ್ತೆ ಪರಾರಿ
ಹೊಸದಿಲ್ಲಿ: ತನ್ನ 22 ವರ್ಷದ ಸೊಸೆಯ ಮೇಲೆ ಅತ್ತೆಯೇ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಬುಧವಾರ ಈಶಾನ್ಯ ದಿಲ್ಲಿಯ ನ್ಯೂ ಉಸ್ಮಾನ್ ಪುರ್ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆಗೆ ಶೇ. 25-30ರಷ್ಟು ಸುಟ್ಟ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಮಹಿಳೆಯ ಅತ್ತೆ-ಮಾವ ಪರಾರಿಯಾಗಿದ್ದು, ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಸಂತ್ರಸ್ತ ಮಹಿಳೆಯು ನವೆಂಬರ್ 2021ರಲ್ಲಿ ವಿವಾಹವಾಗಿದ್ದು, ಆಕೆಗೆ ಆರು ತಿಂಗಳ ಮಗುವಿದೆ. ಆಕೆಗೆ ಆಕೆಯ ಅತ್ತೆ ಮಾವ ಹಾಗೂ ಪತಿಯೂ ಸೇರಿದಂತೆ ಎಲ್ಲರೂ ಕಿರುಕುಳ ನೀಡಿ ದೌರ್ಜನ್ಯವೆಸಗುತ್ತಿದ್ದರು ಎಂದು ಆ ಮಹಿಳೆಯು ಆರೋಪಿಸಿದ್ದಾರೆ.
“ನನ್ನ ಮತ್ತು ನನ್ನ ಅತ್ತೆಮಾವನ ನಡುವೆ ನ್ಯಾಯಾಲಯದಲ್ಲಿ ಪ್ರಕರಣವೊಂದು ನಡೆಯುತ್ತಿದೆ. ಮಧ್ಯಾಹ್ನ ನ್ಯಾಯಾಲಯಕ್ಕೆ ತೆರಳಿ ಮನೆಗೆ ಮರಳಿದ್ದ ನಾನು ನೀರಿನ ಮೋಟರ್ ಬಳಿ ಇರುವ ಮನೆಯ ಎರಡನೆ ಅಂತಸ್ತಿನಲ್ಲಿದ್ದಾಗ, ನನ್ನ ಬಳಿಗೆ ಬಂದ ನನ್ನ ಅತ್ತೆಯು ನನ್ನ ಮೇಲೆ ಆ್ಯಸಿಡ್ ಸುರಿದರು. ನನ್ನೆದುರಿಗೆ ನಾನು ನನ್ನ ಮಾವ ಹಾಗೂ ನಾದಿನಿಯನ್ನು ಕಂಡೆ. ನಾನು ನನ್ನ ಅತ್ತೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದೆನಾದರೂ, ನಾನು ಆಕೆಯನ್ನು ಸಾಯಿಸಿಬಿಡುತ್ತೇನೆ ಎಂದು ಕೂಗಿಕೊಂಡು ಆಕೆ ಅಲ್ಲಿಂದ ಓಡಿ ಹೋದಳು. ನಾನು ಕೆಳ ಅಂತಸ್ತಿಗೆ ಇಳಿದು ಹೋದೆ. ನನ್ನ ಮುಖವು ಉರಿಯುತ್ತಿತ್ತು. ನಾನು ಸ್ಥಳೀಯ ಬಾಲಕನೊಬ್ಬನ ನೆರವು ಪಡೆದೆ ಹಾಗೂ ಆತ ನನ್ನನ್ನು ತನ್ನ ಸ್ಕೂಟರ್ ನಲ್ಲಿ ಆಸ್ಪತ್ರೆಗೆ ತಲುಪಿಸಿದ” ಎಂದು ಸಂತ್ರಸ್ತ ಮಹಿಳೆಯು ನೀಡಿರುವ ಹೇಳಿಕೆಯನ್ನು ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.