ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅದಾನಿ, ಅಂಬಾನಿ ಭಾಗಿ: ಕಪ್ಪುಹಣ ಕುರಿತು ಮೋದಿ ಹೇಳಿಕೆ ನೆನಪಿಸಿದ ಕಾಂಗ್ರೆಸ್
ಹೊಸದಿಲ್ಲಿ: ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅವರ ಉಪಸ್ಥಿತಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಈ ಇಬ್ಬರೂ ಪ್ರತಿಪಕ್ಷಕ್ಕೆ ಕಪ್ಪುಹಣ ನೀಡುತ್ತಿದ್ದಾರೆ ಎಂದು ಪ್ರಧಾನಿ ಮಾಡಿದ್ದ ಆರೋಪವನ್ನು ನೆನಪಿಸಿದ್ದಾರೆ.
2024 ಮೇ 8ರಂದು ಮೋದಿಯವರು,ಭಾರತದ ಅತ್ಯಂತ ದೊಡ್ಡ ಉದ್ಯಮಿಗಳಿಬ್ಬರು ಕಪ್ಪುಹಣವನ್ನು ಟೆಂಪೋಗಳಲ್ಲಿ ತುಂಬಿಸಿ ಸಾಗಿಸಿದ್ದಾರೆ ಎಂದು ಆರೋಪಿಸಿದ್ದರು ಎಂದು ರಮೇಶ ತೆಲಂಗಾಣದ ಕರೀಂ ನಗರದಲ್ಲಿ ರ್ಯಾಲಿಯೊಂದರಲ್ಲಿ ಮೋದಿ ಟೀಕೆಗಳನ್ನು ಉಲ್ಲೇಖಿಸಿ ರವಿವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ‘ನಾವು ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದೆವು. ಸರಿ,ಈಗ ಆ ಇಬ್ಬರು ಮಹನೀಯರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ ’ ಎಂದು ರಮೇಶ ಹೇಳಿದ್ದಾರೆ.
ಲೋಕಸಭಾ ಚುನಾವಣೆಗಳು ಘೋಷಣೆಯಾದ ಬಳಿಕ ಕಾಂಗ್ರೆಸ್ ಅಂಬಾನಿ ಮತ್ತು ಅದಾನಿಯನ್ನು ಟೀಕಿಸುವುದನ್ನು ನಿಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಅದು ಅವರಿಂದ ಕಪ್ಪುಹಣವನ್ನು ಸ್ವೀಕರಿಸಿದೆಯೇ ಎಂದು ಮೋದಿ ಕರೀಂ ನಗರದ ರ್ಯಾಲಿಯಲ್ಲಿ ಪ್ರಶ್ನಿಸಿದ್ದರು.
ಕರೆನ್ಸಿ ನೋಟುಗಳಿಂದ ತುಂಬಿದ ಟೆಂಪೋಗಳು ಕಾಂಗ್ರೆಸ್ ಪಕ್ಷಕ್ಕೆ ತಲುಪಿವೆಯೇ ಎಂದೂ ಅವರು ಪ್ರಶ್ನಿಸಿದ್ದರು.
ಮೋದಿಯವರ ಹೇಳಿಕೆಯ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಈ ವಿಷಯದಲ್ಲಿ ಸಿಬಿಐ ಮತ್ತು ಈ.ಡಿ.ಯಿಂದ ತನಿಖೆಯನ್ನು ನಡೆಸುವಂತೆ ಅವರಿಗೆ ಸವಾಲು ಹಾಕಿದ್ದರು.
ಅದಾನಿ ಮತ್ತು ಅಂಬಾನಿ ಅವರ ಬಳಿ ಕಪ್ಪುಹಣದಿಂದ ತುಂಬಿದ ಚೀಲಗಳಿದ್ದರೆ ಸಿಬಿಐ,ಈ.ಡಿ.ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರೀಯ ಸಂಸ್ಥೆಗಳು ಅವರ ವಿರುದ್ಧ ಕ್ರಮವನ್ನೇಕೆ ತೆಗೆದುಕೊಳ್ಳುತ್ತಿಲ್ಲ ಎಂದು ರಮೇಶ್ ಅವರೂ ಪ್ರಶ್ನಿಸಿದ್ದರು.