ಸಂಭಾವ್ಯಲಂಚ ಕುರಿತು ಅಮೆರಿಕದಿಂದ ಅದಾನಿ ಗ್ರೂಪ್ ತನಿಖೆ ; ಆರೋಪ ನಿರಾಕರಿಸಿದ ಕಂಪನಿ
ಹೊಸದಿಲ್ಲಿ : ಭಾರತದ ಅದಾನಿ ಗ್ರೂಪ್ ನಿಂದ ಸಂಭಾವ್ಯ ಲಂಚ ಮತ್ತು ಅದರ ಸ್ಥಾಪಕ ಗೌತಮ ಅದಾನಿಯವರ ನಡವಳಿಕೆಯನ್ನು ಕೇಂದ್ರೀಕರಿಸಿ ಅಮೆರಿಕದ ಪ್ರಾಸಿಕ್ಯೂಟರ್ಗಳು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ವರದಿ ಮಾಡಿದೆ.
ನ್ಯೂಯಾರ್ಕ್ ಪೂರ್ವ ಜಿಲ್ಲೆಯ ಅಮೆರಿಕ ಅಟಾರ್ನಿ ಕಚೇರಿ ಮತ್ತು ವಾಷಿಂಗ್ಟನ್ ನ ನ್ಯಾಯ ಇಲಾಖೆಯ ವಂಚನೆ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯು ಅದಾನಿ ಗ್ರೂಪ್ನ ಕಂಪನಿಯೊಂದು ಅಥವಾ ಕಂಪನಿಗೆ ಸಂಬಂಧಿಸಿದ ವ್ಯಕ್ತಿಗಳು ಇಂಧನ ಯೋಜನೆಯೊಂದರಲ್ಲಿ ತಮ್ಮೊಂದಿಗೆ ಸಹಕರಿಸಲು ಭಾರತದಲ್ಲಿಯ ಅಧಿಕಾರಿಗಳಿಗೆ ಲಂಚ ಪಾವತಿಯಲ್ಲಿ ತೊಡಗಿಕೊಂಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆಯನ್ನು ನಡೆಸುತ್ತಿದೆ. ತನಿಖೆಯು ಭಾರತದ ನವೀಕರಿಸಬಹುದಾದ ಇಂಧನ ಕಂಪನಿ ಅಝೂರ್ ಪವರ್ ಗ್ಲೋಬಲ್ ಲಿ.ಗೂ.ವಿಸ್ತರಿಸಿದೆ ಎಂದು ವರದಿಯು ತಿಳಿಸಿದೆ.
‘ನಮ್ಮ ಅಧ್ಯಕ್ಷರ ವಿರುದ್ಧ ಯಾವುದೇ ತನಿಖೆ ನಡೆಯುತ್ತಿರುವುದು ನಮಗೆ ತಿಳಿದಿಲ್ಲ. ಆಡಳಿತದ ಉನ್ನತ ಮಾನದಂಡಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಉದ್ಯಮ ಸಮೂಹವಾಗಿ ನಾವು ಭಾರತ ಮತ್ತು ಇತರ ದೇಶಗಳಲ್ಲಿ ಭ್ರಷ್ಟಾಚಾರ ನಿಗ್ರಹ ಮತ್ತು ಲಂಚ ನಿಗ್ರಹ ಕಾನೂನುಗಳಿಗೆ ಒಳಪಟ್ಟಿದ್ದೇವೆ ಮತ್ತು ಅವುಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ’ ಎಂದು ಬ್ಲೂಮ್ಬರ್ಗ್ ಉಲ್ಲೇಖಿಸಿರುವ ಹೇಳಿಕೆಯಲ್ಲಿ ಅದಾನಿ ಗ್ರೂಪ್ ಪ್ರತಿಪಾದಿಸಿದೆ.
ಬ್ರೂಕ್ಲಿನ್ ಮತ್ತು ವಾಷಿಂಗ್ಟನ್ ನ್ಯಾಯ ಇಲಾಖೆಯ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಝೂರ್ ಕೂಡ ಪ್ರತಿಕ್ರಿಯೆ ಕೋರಿ ಮನವಿಗಳಿಗೆ ಉತ್ತರಿಸಿಲ್ಲ.
ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್ಬರ್ಗ್ ರೀಸರ್ಚ್ ಕಳೆದ ವರ್ಷ ಅದಾನಿ ಗ್ರೂಪ್ ವಿರುದ್ಧ ಮಾಡಿದ್ದ ಆರೋಪಗಳ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದೆ.
ತನಿಖೆಯ ಹೊರತಾಗಿಯೂ ಅಮೆರಿಕವು ಅದಾನಿ ಗ್ರೂಪ್ ಕಂಪನಿಗಳೊಂದಿಗೆ ಕಾರ್ಯವನ್ನು ಮುಂದುವರಿಸಿದೆ. ಕಳೆದ ವರ್ಷ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಎದುರಿಸುವ ಉದ್ದೇಶವನ್ನು ಹೊಂದಿರುವ ಶ್ರೀಲಂಕಾದ ರಾಜಧಾನಿಯಲ್ಲಿನ ಪೋರ್ಟ್ ಟರ್ಮಿನಲ್ ಗಾಗಿ ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮವು ಅದಾನಿ ಘಟಕವೊಂದಕ್ಕೆ 553 ಮಿ.ಡಾಲರ್ ಗಳ ಹಣಕಾಸನ್ನು ಒದಗಿಸಿತ್ತು.
ವರದಿಯ ಪ್ರಕಾರ ಅದಾನಿ ತನಿಖೆಯು ಈಗ ಮುಂದುವರಿದ ಹಂತದಲ್ಲಿದೆ ಮತ್ತು ನ್ಯಾಯ ಇಲಾಖೆಯು ಭಾಗಿಯಾಗಿರುವ ಪಾರ್ಟಿಗಳಿಗೆ ತಿಳಿಸದೆಯೇ ತನ್ನ ತನಿಖೆಗಳನ್ನು ಮುಂದುವರಿಸಬಹುದು. ಅದಾನಿ,ಅವರ ಕಂಪನಿ ಮತ್ತು ಅಝೂರ್ ವಿರುದ್ಧ ನ್ಯಾಯ ಇಲಾಖೆಯು ಯಾವುದೇ ತಪ್ಪಿನ ಆರೋಪವನ್ನು ಹೊರಿಸಿಲ್ಲ ಮತ್ತು ತನಿಖೆಗಳು ಯಾವಾಗಲೂ ಕಾನೂನು ಕ್ರಮಕ್ಕೆ ಕಾರಣವಾಗುವುದಿಲ್ಲ.
ಅಮೆರಿಕದ ಹೂಡಿಕೆದಾರರು ಅಥವಾ ಮಾರುಕಟ್ಟೆಗಳಿಗೆ ನಿರ್ದಿಷ್ಟ ಸಂಬಂಧಗಳಿದ್ದರೆ ವಿದೇಶಿ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸಲು ವಿದೇಶಿ ಭ್ರಷ್ಟಾಚಾರ ಪದ್ಧತಿಗಳ ಕಾಯ್ದೆಯು ಅಮೆರಿಕದ ಪ್ರಾಸಿಕ್ಯೂಟರ್ಗಳಿಗೆ ಅನುಮತಿ ನೀಡಿದೆ. ಅದಾನಿ ಗ್ರೂಪ್ ಶೇರುಗಳು ಅಮೆರಿಕದ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸುತ್ತಿಲ್ಲವಾದರೂ ಅಮೆರಿಕನ್ ಹೂಡಿಕೆದಾರರನ್ನು ಹೊಂದಿವೆ.