ಇಂಡಿಯಾ ಮೈತ್ರಿಕೂಟವನ್ನು ನಿತೀಶ್ ಕುಮಾರ್ ತೊರೆದ ನಂತರ ಮೈತ್ರಿಪಕ್ಷಗಳಲ್ಲಿ ನಿರಾಳತೆ ಮನೆ ಮಾಡಿದೆ: ಕಾಂಗ್ರೆಸ್
ಕಿಶನ್ ಗಂಜ್ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆತುರಾತುರವಾಗಿ ಬಿಜೆಪಿ ನೇತೃತ್ವದ ಎನ್ ಡಿ ಎಗೆ ಮರಳಿರುವುದು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಉತ್ತಮ ಬಿಡುಗಡೆಯಾಗಿದ್ದು, ಇಂಡಿಯಾ ಮೈತ್ರಿಕೂಟದ ಹಲವಾರು ನಾಯಕರು ನಿರಾಳತೆಯ ಭಾವ ಅನುಭವಿಸುತ್ತಿದ್ದಾರೆ ಎಂದು ಸೋಮವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ಬಿಹಾರವನ್ನು ಪ್ರವೇಶಿಸಿದ ಬೆನ್ನಿಗೇ ಕಿಶನ್ ಗಂಜ್ ಜಿಲ್ಲೆಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಜೈರಾಮ್ ರಮೇಶ್, ನಿತೀಶ್ ಕುಮಾರ್ ನಿರ್ಗಮನದಿಂದ ಇಂಡಿಯಾ ಒಕ್ಕೂಟದ ಮೇಲೆ ಖಂಡಿತ ಯಾವುದೇ ಪ್ರತಿಕೂಲ ಪರಿಣಾಮವಾಗುವುದಿಲ್ಲ. ಹಲವಾರು ನಾಯಕರು ನಿರಾಳತೆಯ ಭಾವ ಪ್ರದರ್ಶಿಸುತ್ತಿದ್ದು, ಆ ಮನುಷ್ಯ ಹೊರ ಹೋಗಿದ್ದಕ್ಕೆ ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಇದು ಒಳ್ಳೆಯ ಬಿಡುಗಡೆ” ಎಂದು ಹೇಳಿದ್ದಾರೆ.
“ಪಾಟ್ನಾದಲ್ಲಿ ನಿತೀಶ್ ಕುಮಾರ್ ವಿರೋಧ ಪಕ್ಷಗಳ ನಾಯಕರ ಪ್ರಥಮ ಸಭೆ ನಡೆಸಿ, ಪ್ರತಿ ಸಭೆಗೂ ಹಾಜರಾಗುತ್ತಿದ್ದರು ಎಂಬುದು ನಿಜ. ಆದರೆ, ಅವರ ಯೋಜನೆಗಳೇನು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಹೋಗಿದ್ದರಿಂದ ಕಳೆದ ಎರಡು ಅಥವಾ ಮೂರು ತಿಂಗಳಲ್ಲಿನ ಅವರ ವರ್ತನೆಯು ಸ್ಫೂರ್ತಿದಾಯಕ ವಿಶ್ವಾಸ ಮೂಡಿಸಲಿಲ್ಲ” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ‘ಆಯಾ ರಾಮ್ ಗಯಾ ರಾಮ್’ ನುಡಿಗಟ್ಟಿನ ಬದಲು ‘ಆಯಾ ಕುಮಾರ್, ಗಯಾ ಕುಮಾರ್’ ಎಂಬ ನುಡಿಗಟ್ಟನ್ನು ಇನ್ನು ಮುಂದೆ ಬಳಸಬೇಕು ಎಂದೂ ನಿತೀಶ್ ಕುಮಾರ್ ಕುರಿತು ಅವರು ವ್ಯಂಗ್ಯವಾಡಿದ್ದಾರೆ